ಮಂಗಳೂರು: ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ವಿಜಿತ್ ಎಂಬವರು ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಹದಿಮೂರು ಸಾವಿರ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸ್ಥಳದಲ್ಲಿಯೇ ಸಿಕ್ಕಿ ಬಿದ್ದಿದ್ದಾರೆ.
ದೂರುದಾರರು ತನ್ನ ತಾಯಿಯ ಹೆಸರಿನಲ್ಲಿರುವ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ಉದ್ದೇಶಿಸಿದ್ದು, ದಾಖಲೆಗಳನ್ನು ತಯಾರು ಮಾಡಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಿಸಿದಾಗ ದೂರುದಾರರ ಅಜ್ಜನ ಮರಣ ಪ್ರಮಾಣಪತ್ರ ಮತ್ತು ಸಂತತಿ ನಕ್ಷೆ ಮಾಡಿಕೊಂಡು ಬರುವಂತೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ದೂರುದಾರರು ಕಳೆದ ಸಪ್ಟೆಂಬರ್ ತಿಂಗಳಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಎರಡರಿಂದ ಮೂರು ಬಾರಿ ಕಚೇರಿಗೆ ತೆರಳಿದರೂ ಮರಣ ದೃಢೀಕರಣ ಪತ್ರ ಸಿಕ್ಕಿರಲಿಲ್ಲ.ನ.20ರಂದು ಗ್ರಾಮ ಆಡಳಿತಾಧಿಕಾರಿ ವಿಜಿತ್ ನಂಬರ್ ಗೆ ಕರೆಮಾಡಿ ವಿಚಾರಿಸಿದಾಗ ನಿಮ್ಮ ಅಜ್ಜನ ಮರಣ ದೃಢೀಕರಣ ಪತ್ರ ರೆಡಿ ಇದೆ ಚೇಳ್ಯಾರು ಗ್ರಾಮ ಕರಣೀಕರ ಕಚೇರಿಗೆ ಬಂದು ಪಡೆದುಕೊಳ್ಳಿ ಬರುವಾಗ 15ಸಾವಿರ ತನ್ನಿ ಎಂದು ತಿಳಿಸಿದಾಗ ಅಷ್ಟೊಂದು ಹಣ ನನ್ನಲಿಲ್ಲ ಎಂದು ತಿಳಿಸಿದ್ದರು. ಬಳಿಕ ನ.22ರಂದು ಕಚೇರಿಗೆ ತೆರಳಿ ಗ್ರಾಮ ಆಡಳಿತಾಧಿಕಾರಿಯನ್ನು ಭೇಟಿಯಾದ ವೇಳೆ ಮರಣದ ದೃಡೀಕರಣದ ಪತ್ರವನ್ನು ನೀಡಿ ಇದನ್ನು ಮಾಡಿಕೊಟ್ಟದ್ದಕ್ಕಾಗಿ 15ಸಾವಿರ ನೀಡುವಂತೆ ಹೇಳಿದ್ದರು. ಅಷ್ಟೊಂದು ಹಣ ನನ್ನಲ್ಲಿ ಇಲ್ಲ ಎಂದಾಗ 2ಸಾವಿರ ಕಡಿಮೆ ಮಾಡಿ 13ಸಾವಿರ ರೂಪಾಯಿನ್ನು ಸುರತ್ಕಲ್ ನಾಡ ಕಚೇರಿಗೆ ಬಂದು ನೀಡುವಂತೆ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.ಅದರಂತೆ ಇಂದು ದೂರುದಾರರ ಕೈಯಿಂದ ಗ್ರಾಮಾಡಳಿತಾಧಿಕಾರಿ ವಿಜಿತ್ 13ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆರೋಪಿ ವಿಜಿತ್ ಅವರನ್ನು ದಸ್ತಗಿರಿ ಮಾಡಲಾಗಿದ್ದು ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕ.ಲೋಕಾಯುಕ್ತ, ಮಂಗಳೂರು ಪೊಲೀಸ್ ಅಧೀಕ್ಷಕ ಸಿ ಎ ಸೈಮನ್ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕರಾದ ಚೆಲುವರಾಜು, ಪೊಲೀಸ್ ನೀರೀಕ್ಷಕರಾದ ಅಮಾನುಲ್ಲ, ಸುರೇಶ್ ಕುಮಾರ್ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ಕೈಗೊಂಡಿದ್ದರು.