ಸಂಚಾರಿ ಪೊಲೀಸರಿಗೆ ದಂಡ ಮೊತ್ತವನ್ನು ಸಂಗ್ರಹಿಸಲು ಅವಕಾಶವಿಲ್ಲ – ದಂಡದ ಮೊತ್ತವನ್ನು ನಿರ್ಧರಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ – ಹೈಕೋರ್ಟ್

ಮಂಗಳೂರು (ಬೆಂಗಳೂರು): ಸಂಚಾರಿ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ಪೊಲೀಸರು ತಪಾಸಣೆ ಮಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ ಹಾಗೂ ಸಂಚಾರ ಪೊಲೀಸರು ಆರೋಪಿತನಿಂದ ದಂಡದ ಮೊತ್ತವನ್ನು ಸಂಗ್ರಹಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೆ.ಆರ್.ಪೇಟೆ ಸುಭಾಷ್ ನಗರದ ನಿವಾಸಿ ಕೆ.ಟಿ.ನಟರಾಜುರವರು ಸಲ್ಲಿಸಿದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದ್ದಾರೆ. ಹೆಲೈಟ್ ಧರಿಸದೇ ಇರುವುದಕ್ಕೆ ಫೈನ್ ಕಟ್ಟಲು ನಿರಾಕರಿಸಿದ ಮತ್ತು ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದ ಆರೋಪ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದು ಮಾಡುವಂತೆ ಕೋರಿ ಕೆ.ಟಿ.ನಟರಾಜು ಎಂಬವರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖಿಸಿದ ನ್ಯಾಯಪೀಠ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿ ಹೊರಡಿಸಿರುವ ಸುತ್ತೋಲೆ ಪ್ರಕಾರ, ದಂಡದ ಮೊತ್ತವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಮಾತ್ರ ಅಧಿಕಾರವಿದೆ. ಯಾವುದೇ ಪರಿಸ್ಥಿತಿಯಲ್ಲೂ ಸಂಚಾರ ಪೊಲೀಸರು ಆರೋಪಿಯಿಂದ ದಂಡ ಸಂಗ್ರಹಿಸಲು ಸಾಧ್ಯವಿಲ್ಲ. ವಾಹನ ತಪಾಸಣಾ ಚಟುವಟಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಮುಂದಾದರೆ ವ್ಯಕ್ತಿಯನ್ನು ತಡೆಯಬೇಕು. ಸ್ಥಳಕ್ಕೆ ಠಾಣೆಯ ಇತರ ಪೊಲೀಸರನ್ನು ಕರೆಸಿ, ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿದ್ದಾರೆ. ದಂಡ ಪಾವತಿಸದಿದ್ದರೆ ವಾಹನವನ್ನು ಜಪ್ತಿ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ. ಪ್ರಕರಣದಲ್ಲಿ ಪೊಲೀಸರೇ ಠಾಣೆಯಲ್ಲಿ ಬೈಕ್ ನಿಲ್ಲಿಸಲು ಅರ್ಜಿದಾರರಿಗೆ ಬಲವಂತಪಡಿಸಿದ್ದಾರೆ. ಕೋರ್ಟ್ ಅನುಮತಿ ಪಡೆಯದೆ ಅರ್ಜಿದಾರನಿಗೆ ಕೋಳ ಹಾಕಿ ಬಂಧಿಸಿದ್ದಾರೆ ಎಂದು ನಟರಾಜ್ ಪರ ವಕೀಲ ಸಿ.ಎನ್.ರಾಜು ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here