ಮಾ.7ರಿಂದ ದ.ಕ. ಜಿಲ್ಲಾದ್ಯಂತ ಗ್ಯಾರಂಟಿ ಫಲಾನುಭವಿಗಳ ಸಮಾವೇಶ-ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

    ಮಂಗಳೂರು: ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರಾಜ್ಯ ಸರಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವು ಮಾರ್ಚ್ 7ರಿಂದ ನಡೆಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ರಾಜ್ಯ ಸರಕಾರವು ಅನುಷ್ಠಾನಕ್ಕೆ ತಂದಿರುವ ವಿವಿಧ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಅಭೂತಪೂರ್ವ ಯೋಜನೆಯಾಗಿದೆ. ಯಾರೂ ನಿರೀಕ್ಷಿಸಿರದ ವೇಗದಲ್ಲಿ ಜಾರಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಜನತೆಗೆ ಲಾಭ ಸಿಕ್ಕಿದೆ. ಜನತೆಯ ಈ ನೆಮ್ಮದಿ ಮತ್ತು ತೃಪ್ತಿಯನ್ನು ಅಭಿವ್ಯಕ್ತಗೊಳಿಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಾ.7ರಂದು ಪುತ್ತೂರು, ಮುಲ್ಕಿ, ಮಂಗಳೂರು ತಾಲೂಕು, ಮಾ.9ರಂದು ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ ತಾಲೂಕು, ಮಾ.10 ಸುಳ್ಯ, ಕಡಬ, ಮೂಡುಬಿದಿರೆ ತಾಲೂಕುಗಳಲ್ಲಿ ಸಮಾವೇಶ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.

    ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೊಸದಾಗಿ ನೋಂದಣಿ ಮಾಡಲು ಕೌಂಟರನ್ನು ಸಮಾವೇಶದಲ್ಲಿ ತೆರೆಯಲಾಗುವುದು, ಅಲ್ಲದೆ ಈಗಾಗಲೇ ಯೋಜನೆಯ ಲಾಭ ಪಡೆಯುತ್ತಿರುವ ಫಲಾನುಭವಿಗಳ ಕುಂದುಕೊರತೆ ಪರಿಹರಿಸಲು ಪ್ರತ್ಯೇಕ ಕೇಂದ್ರವನ್ನು ಸಮಾವೇಶ ಸ್ಥಳದಲ್ಲಿ ತೆರೆಯಲಾಗುವುದು ಎಂದು ಅವರು ಹೇಳಿದ್ದಾರೆ. ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್, ಶಾಸಕರಾದ ಅಶೋಕ್ ಕುಮಾರ್ ರೈ, ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಡಾ.ಕೆ. ಆನಂದ್ ಮತ್ತಿತರರು ಉಪಸ್ಥಿತರಿದ್ದರು.

    LEAVE A REPLY

    Please enter your comment!
    Please enter your name here