ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಪದಗ್ರಹಣ

ಜಿಲ್ಲೆಗೆ ಕೀರ್ತಿ ತರುವ ಕೆಲಸ ಡಾ|ಎಂ.ಎನ್.ಆರ್.ಮೂಲಕ ಆಗಿದೆ-ಯು.ಟಿ.ಖಾದರ್

ಮಂಗಳೂರು: ಸಹಕಾರಿ ಕ್ಷೇತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತರುವ ಕೆಲಸ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರ ಮೂಲಕ ಆಗಿದೆ ಎಂದು ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರ ಅಧಿಕಾರ ಸ್ವೀಕಾರ ಮತ್ತು ಹುಟ್ಟುಹಬ್ಬ ಆಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಶುಭಹಾರೈಸಿ ಮಾತನಾಡಿದರು. ಸಮಾರಂಭ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಕಾರಣ ಅವಿರೋಧವಾಗಿ ಆಯ್ಕೆಯಾಗಲು, ನಿರಂತರ ಗೆಲುವು ಸಾಧಿಸಲು ಕಾರಣವಾಯಿತು. ಸಹಕಾರಿ ಬ್ಯಾಂಕ್ ಹಲವು ಸಂಸ್ಥೆಗಳು ಬೆಳೆಯಲು ಸಹಾಯ ನೀಡಿದ ಕಾರಣ ಜಿಲ್ಲೆಯಲ್ಲಿ ಸಾಕಷ್ಟು ಕುಟುಂಬಗಳಿಗೆ ಆಧಾರವಾಗಿದೆ. ಮುಂದೆಯೂ ಸಹಕಾರಿಗಳ ಕನಸು ನನಸು ಮಾಡುವಂತಾಗಲಿ ಎಂದು ಯು.ಟಿ.ಖಾದರ್ ಶುಭ ಹಾರೈಸಿದರು.

ಎಲ್ಲರ ಪ್ರಯತ್ನದ ಫಲವಾಗಿ ಬ್ಯಾಂಕ್ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ:
ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಎಲ್ಲರ ಸಾಮೂಹಿಕ ಪ್ರಯತ್ನದ ಫಲವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಸಹಕಾರಿ ರಂಗದ ಧುರೀಣ ಮೊಳಹಳ್ಳಿ ಶಿವರಾಯರ ಮೂಲಕ ಈ ಸಂಸ್ಥೆ ಹೆಮ್ಮರವಾಗಿ ರಾಷ್ಟ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದಿದೆ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸಹಾಯವಾಗಿದೆ. ರೈತರ ಬಡ್ಡಿ ಸಾಲವನ್ನು ತ್ವರಿತವಾಗಿ ನೀಡುವ ಮೂಲಕ ಅವರಿಗೆ ಆಧಾರ ನೀಡುವ ಸಂಸ್ಥೆಯಾಗಿದೆ ಎಂದು ಹೇಳಿ, ಸಂಸ್ಥೆಯ ಬೆಳವಣಿಗೆಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಾಧಿಸಿರುವ ಸಾಧನೆಯ ಮೂಲಕ ಜಿಲ್ಲೆಯ ರೈತಾಪಿ ವರ್ಗದ ಆಶಾ ಕಿರಣವಾಗಿದೆ ಎಂದರು. ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ರಾಜೇಂದ್ರ ಕುಮಾರ್ ಅವರ ನೆರವಿನಿಂದ ಬಂಟರು ಸೇರಿದಂತೆ ಎಲ್ಲಾ ಸಮುದಾಯದ ಬೆಳವಣಿಗೆಗೆ ಸಹಾಯವಾಗಿದೆ ಎಂದರು. ಬ್ಯಾಂಕಿನ ನೂತನ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ ಬಳಜ್ಜ, ಕುಶಾಲಪ್ಪ ಗೌಡ ಪೂವಾಜೆ, ವಿನಯ ಕುಮಾರ್ ಸೂರಿಂಜೆ, ಭಾಸ್ಕರ ಎಸ್.ಕೋಟ್ಯಾನ್, ಕೆ.ಹರಿಶ್ಚಂದ್ರ, ಟಿ.ಜಿ.ರಾಜರಾಮ ಭಟ್, ದೇವಿ ಪ್ರಸಾದ್ ಶೆಟ್ಟಿ, ಬಿ.ಅಶೋಕ್ ಕುಮಾರ್ ಶೆಟ್ಟಿ, ಎಸ್.ರಾಜು ಪೂಜಾರಿ, ಎಂ.ವಾದಿರಾಜ ಶೆಟ್ಟಿ,ಎಸ್.ಎನ್. ಮನ್ಮಥ, ತಾಲೂಕು ಕೃಷಿ ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ,ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here