ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ – ವಿಜ್ಞಾನಿಗಳಿಗೆ ಅಚ್ಚರಿ

ಮಂಗಳೂರು/ಕಾಸರಗೋಡು: ಅಪರೂಪದ ರೇಡಿಯಂನಂತೆ ಹೊಳೆಯುವ ಅಣಬೆ ಕಾಸರಗೋಡಿನಲ್ಲಿ ಪತ್ತೆಯಾಗಿದೆ. ನೈಸರ್ಗಿಕವಾಗಿ ಹೊಳೆಯುವ ಅತೀ ಅಪರೂಪದ ಅಣಬೆಯನ್ನು ಸಂಶೋಧಕರು ಪತ್ತೆ ಮಾಡಿದ್ದು, ರಾತ್ರಿಯ ದಟ್ಟ ಕತ್ತಲಲ್ಲಿ ಇದು ರೇಡಿಯಂನಂತೆ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತದೆ. ‘ಫಿಲೋಬೊಲೆಟಸ್ ಮ್ಯಾನಿಪುಲಾರಿಸ್’ ಎಂದು ಕರೆಯಲ್ಪಡುವ ಈ ಆಕರ್ಷಕ ಶಿಲೀಂಧ್ರಗಳು ತಮ್ಮದೇ ಆದ ಬೆಳಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಕಾಸರಗೋಡು ವಿಭಾಗ ಮತ್ತು ಮಶ್ರೂಮ್ಸ್ ಆಫ್ ಇಂಡಿಯಾ ಕಮ್ಯುನಿಟಿ ಜಂಟಿಯಾಗಿ ಕೇರಳದ ರಾಣಿಪುರಂ ಅರಣ್ಯದಲ್ಲಿ ಮೈಕ್ರೋ ಫಂಗಲ್ ಸಮೀಕ್ಷೆ ನಡೆಸಿದ ನಂತರ ಈ ರಾತ್ರಿ ಬೆಳಗುವ ಅಣಬೆಗಳು ಇರುವುದು ಬೆಳಕಿಗೆ ಬಂದಿದೆ. 50ಕ್ಕೂ ಹೆಚ್ಚು ವಿವಿಧ ಜಾತಿಯ ಅಣಬೆಗಳು ಕಂಡು ಬಂದಿವೆ. ಅದರಲ್ಲೂ ರಾತ್ರಿಯ ವೇಳೆ ಬೆಳಕು ಸೂಸುವ ಬಯೋಲ್ಯುಮಿನೆಸೆಂಟ್ ಅಣಬೆಗಳು ಈ ಸಮೀಕ್ಷಾ ತಂಡದ ಪ್ರಮುಖ ಆವಿಷ್ಕಾರವಾಗಿದೆ. ಆದರೆ ಅವುಗಳು ಸೇವಿಸಲು ಅಥವಾ ಬಳಕೆಗೆ ಯೋಗ್ಯವಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಅಣಬೆಗಳು ತಮ್ಮ ಜೀವಕೋಶಗಳಲ್ಲಿನ ರಾಸಾಯನಿಕ ಕ್ರಿಯೆಯಿಂದಾಗಿ ರಾತ್ರಿಯಲ್ಲಿ ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊರಸೂಸುತ್ತವೆ. ಇವು ಉಷ್ಣವಲಯದ, ಆರ್ದ್ರತೆ ಇರುವ ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತವೆ.

LEAVE A REPLY

Please enter your comment!
Please enter your name here