ಸುಖವೀವ ಸುರಪಾನ ಪ್ರಿಯರಿಗೆ ಗುಡ್‌ ನ್ಯೂಸ್‌ – ಜುಲೈ 1ರಿಂದ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಬೆಲೆ ಇಳಿಕೆ

ಮಂಗಳೂರು/ಬೆಂಗಳೂರು: ರಾಜ್ಯದಲ್ಲಿ ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಸಲು ಸರ್ಕಾರ ಮುಂದಾಗಿದ್ದು ಜುಲೈ 1ರಿಂದ ಭಾರಿ ಬೆಲೆಯ ಬ್ರ್ಯಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ. ನೆರೆಹೊರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆಗೆ ಅನುಗುಣವಾಗಿ ರಾಜ್ಯದಲ್ಲೂ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯನ್ನು ಪರಿಷ್ಕರಿಸುವುದಾಗಿ ಸರಕಾರ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲೇ ಘೋಷಿಸಿದ್ದು ಈಗ ಜಾರಿಯಾಗುತ್ತಿದೆ.

ಹೊರ ರಾಜ್ಯಗಳಲ್ಲಿನ ಮದ್ಯದ ದರಪಟ್ಟಿ ಆಧರಿಸಿ ಹೊಸದಾಗಿ ಬೆಲೆ ನಿಗದಿಪಡಿಸಲಾಗಿದೆ. ಅಬಕಾರಿ ಆದಾಯ ಸಂಗ್ರಹ ಹೆಚ್ಚಳಕ್ಕಾಗಿ ರಾಜ್ಯ ಸರಕಾರ ಸತತವಾಗಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಹೆಚ್ಚಿಸುತ್ತಲೇ ಬಂದಿತ್ತು. ಇದೇ ಮೊದಲ ಬಾರಿಗೆ ಎಇಡಿ ಕಡಿಮೆ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದ್ದು ಅಧಿಸೂಚನೆ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಿದೆ.

ಹೆಚ್ಚುವರಿ ಅಬಕಾರಿ ತೆರಿಗೆ ಪ್ರಮಾಣ ರಾಜ್ಯದಲ್ಲಿ ಹೆಚ್ಚು ಇರುವ ಕಾರಣ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಎಇಡಿ ದರ ಪರಿಷ್ಕರಣೆ ನಿರ್ಧಾರ ಮಾಡಿದೆ.

LEAVE A REPLY

Please enter your comment!
Please enter your name here