ಮಂಗಳೂರು/ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಹಿ ಹಾಕಿದ್ದ ಮೊದಲ ಕಡತಕ್ಕೆ ವಿಘ್ನ ಉಂಟಾಗಿದ್ದು, ದೇವದಾರಿ ಮೈನಿಂಗ್ ಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲಿಗೆ ಸಹಿ ಹಾಕಿದ್ದ ರಾಜ್ಯಕ್ಕೆ ಸಂಬಂಧಿಸಿದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಗಣಿಗಾರಿಕೆಗೆ ಸಂಬಂಧಿಸಿದ ಯೋಜನೆಗೆ ರಾಜ್ಯ ಸರ್ಕಾರ ತಡೆ ನೀಡಿದೆ.
ಸಂಡೂರು ತಾಲೂಕಿನ ದೇವದಾರಿ ಹಿಲ್ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸುವ ಸಂಬಂಧದ ಅರಣ್ಯ ತೀರುವಳಿ ಗುತ್ತಿಗೆ ಪತ್ರ ತಡೆಹಿಡಿಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶುಕ್ರವಾರ ವಿಜಯನಗರ ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ದೇವದಾರಿ ಗಣಿಗಾರಿಕೆಗೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿ ಅವರಿಂದ ವರದಿ ಕೇಳಿದ್ದೇನೆ. ಅದು ಬಂದ ಬಳಿಕ ಸರಕಾರದ ನಿಲುವನ್ನು ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು.