ಮಂಗಳೂರು/ಬೆಂಗಳೂರು: ಕರ್ನಾಟಕದಲ್ಲಿ ಡೆಂಗ್ಯೂ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದ್ದು, ಜನವರಿಯಿಂದ ಜು.1ರ ತನಕ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. ಈ ವರ್ಷ 47% ಟೆಸ್ಟಿಂಗ್ ರೇಟ್ ಕೂಡ ಹೆಚ್ಚಳ ಮಾಡಲಾಗಿದೆ. ಡೆಂಗ್ಯೂ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು ಈ ಕುರಿತು ಸಿಎಂ ಕೂಡ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಡೆಂಗ್ಯೂ ಟೆಸ್ಟಿಂಗ್ಗೆ ಹೆಚ್ಚಿನ ಬೆಲೆ ವಿಧಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿ 600 ರೂ.ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸ್ಕ್ರೀನಿಂಗ್ ಪರೀಕ್ಷೆ, ರ‍್ಯಾಪಿಡ್ ಕಾರ್ಡ್ ಟೆಸ್ಟ್ ಹಾಗೂ ಐಜಿಜಿ ಟೆಸ್ಟ್‌ಗೆ 250 ರೂಪಾಯಿ ದರ ನಿಗದಿಯಾಗಿದೆ. 2016ರಲ್ಲಿ ನಿಗದಿಯಾಗಿದ್ದ ದರಗಳನ್ನು ಪರಿಷ್ಕರಣೆ ಮಾಡಿ ಈ ಆದೇಶ ಹೊರಡಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಲ್ಯಾಬ್‌ಗಳಿಗೆ ಈ ದರ ಅನ್ವಯವಾಗುತ್ತದೆ. ಬೆಂಗಳೂರಿನಲ್ಲಿ ಒಂದೇ ದಿನ 18 ಜನರಿಗೆ ಡೆಂಗ್ಯೂ ಜ್ವರ ದೃಢವಾಗಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಒಟ್ಟು 31 ಕೇಸ್ ಡೆಂಗ್ಯೂ ಪಾಸಿಟೀವ್ ಕೇಸ್ ದಾಖಲಾಗಿವೆ. ಸಿಲಿಕಾನ್ ಸಿಟಿಯಲ್ಲಿ 300 ಜನರ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, ಆ ಪೈಕಿ 18 ಜನರಲ್ಲಿ ಪಾಸಿಟಿವ್ ಬಂದಿದೆ. ಈ ಮೂಲಕ ಬೆಂಗಳೂರಿನಲ್ಲಿ 1,564ಕ್ಕೆ ಡೆಂಗ್ಯೂ ಕೇಸ್ಗಳು ಏರಿಕೆ ಆಗಿದೆ. ರಾಜ್ಯದಲ್ಲಿ ಒಟ್ಟು 10,5283 ಜನರನ್ನು ಶಂಕಿತ ಕೇಸ್ ಗಳನ್ನ ಪತ್ತೆ ಹಚ್ಚಿದ್ದು, ಅದರಲ್ಲಿ ಒಟ್ಟು 4,5751 ಜನರಿಗೆ ರಕ್ತಪರಿಶೀಲಿಸಲಾಗಿತ್ತು. ಆ ಪೈಕಿ 1ಜಿಎಂ ಮ್ಯಾಕ್ ಎಳಿಸ ಕೇಸ್ಗಳು 2314 ಪತ್ತೆಯಾಗಿದ್ದು NS1 ಅಂಟಿಜೆನ್ ಕೇಸ್ ಗಳು ಒಟ್ಟು 2513 ಪತ್ತೆಯಾಗಿವೆ. ಆ ಮೂಲಕ ಒಟ್ಟು ರಾಜ್ಯದಲ್ಲಿ 4867 ಡೆಂಗ್ಯೂ ಕೇಸ್ ಗಳು ದಾಖಲಾಗಿವೆ.
ಈ ಕುರಿತು ಮಾತನಾಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಗ್ಯೂ ಹರಡುವಿಕೆ ಬಗ್ಗೆ ವಿವಿಧ ಇಲಾಖೆಗಳ ಜೊತೆ ಸಭೆ ಮಾಡಿ, ಅದರ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಸದಾ ಮಳೆ ಬರುತ್ತಿದ್ದರೆ, ಡೆಂಗ್ಯೂ ಸೊಳ್ಳೆ ಬರೋದಿಲ್ಲ. ನಿಂತು ಬೀಳುವ ಮಳೆಯಿಂದಾಗಿ ಸೊಳ್ಳೆ ಹರಡುವಿಕೆ ಹೆಚ್ಚಾಗುತ್ತದೆ. ಈ ರೀತಿಯ ಹವಾಮಾನ ಬದಲಾವಣೆಯಿಂದ ರೋಗ ಉಲ್ಬಣಗೊಳ್ಳುತ್ತಿದೆ. ಇನ್ನು ಕೆಪಿಎಂ ಆ್ಯಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯವಾಗಿದೆ. ಇಷ್ಟೇ ಅಲ್ಲದೆ ರಾಜ್ಯದಲ್ಲಿ ಮತ್ತಷ್ಟು ಕೇಸ್ಗಳು ಇರಬಹುದು, ಈ ಕುರಿತು ದಿನ ನಿತ್ಯ ಡೆಂಗ್ಯೂ ಬುಲೆಟಿನ್ ಕೊಡಲಾಗುತ್ತದೆ ಎಂದಿದ್ದಾರೆ.