ಮಂಗಳೂರು: ಜು.9ರಂದು ನಗರ ಪೊಲೀಸ್ ಕಮಿಷನರೇಟ್ ನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗಿನ ಜಾವ ದಡ್ಡಲಕಾಡಿನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮಧ್ಯಪ್ರದೇಶದ ನಿವಾಸಿಗಳಾದ ರಾಜು ಸಿಂಘಾನಿಯ (24), ಮಯೂರ್(30), ಬಾಲಿ(22), ವಿಕ್ಕಿ(21) ಎಂದು ತಿಳಿದುಬಂದಿದೆ.
ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಯುವಕರು ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ಮನೆಯೊಂದರ ಕಿಟಕಿಯ ಗ್ರಿಲ್ ಅನ್ನು ತುಂಡರಿಸಿ ಒಳ ಪ್ರವೇಶಿಸಿ ಮನೆ ಯಜಮಾನ ವಿಕ್ಟರ್ ಮೆಂಡೋನ್ಸಾ ರವರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಗಾಯಗೊಳಿಸಿ, ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೋನ್ಸ ರವರಿಗೆ ಕೂಡಾ ಸ್ಕ್ರೂ ಡ್ರೈವರ್ ನಿಂದ ಹೊಡೆದು ಬೊಬ್ಬೆ ಹಾಕದಂತೆ ಹಾಗೂ ಫೋನ್ ಮಾಡದಂತೆ ಬೆದರಿಸಿ ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿ ಕಪಾಟಿನ ಲಾಕರ್ ಒಳಗೆ ಇರಿಸಿದ್ದ ಸುಮಾರು 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦೦೦/- ನಗದು ಹಣವನ್ನು ಸುಲಿಗೆ ಮಾಡಿ, ಮನೆಯ ವೆರಾಂಡದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದರು. ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರು ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಮೂಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಸದರಿ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಆರೋಪಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು.
ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳಗಿನ ಜಾವ ಮೂಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಮಾಹಿತಿ ಪಡೆಯಲಾಗಿ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮೂಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ನೀಡಿದ್ದರು. ಆ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದರು. ಅವರು ನೀಡಿದ ಮಾಹಿತಿಯಂತೆ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ಬಗ್ಗೆ ವಿವರ ಪಡೆದ ಪೊಲೀಸರು ಬಸ್ಸು ನಂಬ್ರ ಕೆಎ-19-ಎಫ್-3575 ದ ನಿರ್ವಾಹಕರನ್ನು ಸಂಪರ್ಕಿಸಿ ಅವರು ನೀಡಿದ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಿದ್ದಾರೆ. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಅವರು ಕೃತ್ಯವೆಸಗಿದ ಬಗ್ಗೆ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. ಅವರನ್ನು ವಶಕ್ಕೆ ಪಡೆದು ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ಅಮಾನತ್ತು ಪಡಿಸಿ ಉರ್ವಾ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿದ್ದು ಆರೋಪಿಗಳನ್ನು ಮಂಗಳೂರಿಗೆ ಕರೆತರಲಾಗಿದೆ.