ಮಂಗಳೂರು/ಬೀಜಿಂಗ್: ಶನಿವಾರ ಸಂಜೆ ಅಮೆರಿಕದ ಪೆನಿಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯ ಸಂದರ್ಭ ನಡೆದ ಹತ್ಯೆಯ ಪ್ರಯತ್ನದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂದಲೆಳೆಯಷ್ಟು ಅಂತರದಲ್ಲಿ ಪಾರಾಗಿದ್ದರು. ಈ ಘಟನೆ ನಡೆದ ಕೆಲ ಗಂಟೆಗಳಲ್ಲೇ ಚೀನಾದ ವ್ಯಾಪಾರಿಗಳು ಹತ್ಯೆ ಪ್ರಯತ್ನದ ಬಳಿಕ `ದಿಟ್ಟ ಪ್ರತಿರೋಧ ತೋರಿದ’ ಟ್ರಂಪ್ ಚಿತ್ರವನ್ನು ಟಿ-ಶರ್ಟ್‍ಗಳಲ್ಲಿ ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಭರ್ಜರಿ ಲಾಭ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
`ಗಲಿಬಿಲಿಗೊಳ್ಳದ ಟ್ರಂಪ್’ ಮುಷ್ಟಿಯನ್ನು ಎತ್ತಿ ಹಿಡಿದಿರುವ, ಭದ್ರತಾ ಅಧಿಕಾರಿಗಳನ್ನು ಅವರನ್ನು ಸುತ್ತುವರಿದಿರುವ ಫೋಟೋ ಮುದ್ರಿಸಿದ ಟಿ-ಶರ್ಟ್‍ಗಳಿಗೆ ಆನ್‍ಲೈನ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಟಿ-ಶರ್ಟ್‍ಗಳಲ್ಲಿ ಫೋಟೋ ಮುದ್ರಿಸುತ್ತಿರುವಾಗಲೇ ಚೀನಾದ ಆನ್‍ಲೈನ್ ವೇದಿಕೆ `ಟವೊಬಾವೊ’ನಲ್ಲಿ 2000ಕ್ಕೂ ಅಧಿಕ ಶರ್ಟ್‍ಗಳಿಗೆ ಬೇಡಿಕೆ ಬಂದಿದೆ ಎಂದು`ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.