ಮಂಗಳೂರು- ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕೆಂದು  ಸಂಸದ ಕ್ಯಾ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಮನವಿ

    ಮಂಗಳೂರು: ಮಂಗಳೂರು ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.
    ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ನಡೆಸುತ್ತಿತ್ತು. ಬ್ರಾಡ್ ಗೇಜ್ ಹಳಿ ಬದಲಾವಣೆ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ನಂತರ, ಬ್ರಾಡ್ ಗೇಜ್ ಗೆ ಪರಿವರ್ತನೆಯಾದರು ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಮಾತ್ರ ಓಡಾಟ ನಡೆಸುತ್ತಿದೆ. ಇದನ್ನು ಸುಬ್ರಹ್ಮಣ್ಯದ ವರೆಗೆ ವಿಸ್ತರಣೆ ಮಾಡಬೇಕು ಎಂದು ಸಂಸದರು ಸದನದಲ್ಲಿ ಒತ್ತಾಯಿಸಿದ್ದಾರೆ.
    ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯೋಗವಾಗಲಿದೆ ಎಂದರು.
    ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯೊಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರಿಗೆ ಮನವಿ ಮಾಡಿದ್ದಾರೆ.
    ಇದಕ್ಕೆ ಉತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದ್ದಾರೆ.

    LEAVE A REPLY

    Please enter your comment!
    Please enter your name here