ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಿದ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿ ಕಾರ್ಕಳ ತಾಲೂಕಿನ ಮುದ್ರಾಡಿ ನಿವಾಸಿ ವಸಂತ ಕೃಷ್ಣ ಶೇರಿಗಾರ ಎಂಬಾತ ಮಂಗಳೂರು ತಾಲೂಕಿನ ಕೆಂಜಾರಿನಲ್ಲಿರುವ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ದೇಶಕರಾಗಿದ್ದ ಮರಪಲ್ಲಿ ರಾಮಯ್ಯ ವಾಸುದೇವ ಎಂಬವರ ಮೊಬೈಲ್ ನಂಬರಿಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಕರೆ ಮಾಡಿದ್ದಲ್ಲದೇ ಮೊಬೈಲ್ ಸಂದೇಶವನ್ನೂ ಕಳುಹಿಸಿ, ಬೆದರಿಕೆ ಹಾಕಿದ ಕುರಿತು ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪೋಲಿಸ್ ನಿರೀಕ್ಷಕ ಕೆ ಆರ್ ನಾಯಕ್ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಆರನೇ ಜೆ.ಎಂ.
ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರಿ ಅವರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ ಅವರು ಭಾಗಶಃ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ನಂತರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಅವರು ಸಾಕ್ಷಿಗಳ ವಿಚಾರಣೆ ನಡೆಸಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.