ಬಿಜೆಪಿಯವರು ಎಸಿಬಿ ತೆಗೆದಿಲ್ಲ. ಅದನ್ನು ತೆಗಿದಿದ್ದು ಹೈ ಕೋರ್ಟ್. ಹಾಗಾಗಿ ಅದರ ಕ್ರೆಡಿಟ್ ಬಿಜೆಪಿ ಗೆ ಸಿಗುವುದಿಲ್ಲ. ಅಧಿಕಾರಕ್ಕೆ ಬಂದ 24 ಘಂಟೆಯಲ್ಲಿ ಎ ಸಿ ಬಿ ಯನ್ನು ಕಿತ್ತು ಹಾಕುವುದಾಗಿ ಹೇಳಿದ್ದ ಬಿಜೆಪಿ 24 ತಿಂಗಳು ಕಳೆದರೂ ಹಾಗೆ ಮಾಡಲಿಲ್ಲ, ಕೊನೆಗೆ ಹೈ ಕೋರ್ಟ್ ಆ ಕೆಲಸ ಮಾಡಿತು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಇನ್ನೊಂದೆಡೆ ಲೋಕಾಯುಕ್ತವನ್ನು ಪುನರ್ ಸ್ಥಾಪಿಸಿದ್ದು ಬಿಜೆಪಿಯಲ್ಲ. ಮೂರು ಪಕ್ಷಗಳಿಗೂ ಲೋಕಾಯುಕ್ತ ಸಂಸ್ಥೆ ಬೇಕಾಗಿಲ್ಲ. ಹೈಕೋರ್ಟ್ ಆದೇಶದ ನಂತರ ಲೋಕಾಯುಕ್ತ ಮರು ಸ್ಥಾಪನೆಯಾಗಿದೆ ಎಂದು ಹೇಳಿರುವ ಎಸ್ ಆರ್ ಹಿರೇಮಠ್ ಮುಂದುವರಿದು, ಸಿ ಎಂ ಸೇರಿದಂತೆ ಪಕ್ಷದ ಕೆಲವು ನಾಯಕರು ಲೋಕಾಯುಕ್ತ ಪುನರ್ ಸ್ಥಾಪಿಸಿದ್ದು ನಾವು ಎಂದು ಹೇಳಿಕೆ ನೀಡುತ್ತಿದ್ದು, ಶಾಸಕರ ಕಮಿಷನ್ ದಂಧೆಯನ್ನು ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
2016 ರಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿ ಎ ಸಿ ಬಿ ರಚನೆ ಮಾಡಿದ ಬಳಿಕ ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಹಲವು ಅರ್ಜಿಗಳು ದಾಖಲಾಗಿತ್ತು. ಮುಖ್ಯವಾಗಿ ಹಿರೇಮಠ್ ಅವರ ಸಮಾಜ ಪರಿವರ್ತನಾ ಸಮುದಾಯ, ವಕೀಲರ ಸಂಘ ಮತ್ತು ವಕೀಲ ಚಿದಾನಂದ ಅರಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸುಧೀರ್ಘ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖ ಅವರಿದ್ದ ನ್ಯಾಯಪೀಠ 2022 ಆಗಸ್ಟ್ 12 ರಂದು ಎಸಿಬಿ ಯನ್ನು ರದ್ದುಗೊಳಿಸಿ ಲೋಕಾಯುಕ್ತವನ್ನು ಬಲ ಪಡಿಸುವಂತೆ ತೀರ್ಪು ನೀಡಿತ್ತು.