ಮಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ತುಳುನಾಡಿನ ಆರಾಧ್ಯ ದೈವ ಗುಳಿಗನಿಗೆ ಜಾಪಾಳ್ ಗುಳಿಗೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಸಚಿವರು ಗುಳಿಗ ದೈವದ ಸನ್ನಿಧಿಗೆ ಬಂದು ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ದೈವದ ಹೆಸರು ಹೇಳುವ ನೈತಿಕತೆ ಸಿ.ಟಿ. ರವಿಯವರಿಗಿಲ್ಲ. ಅವರು ತುಳುನಾಡಿನ ಎಲ್ಲಾ ದೈವಗಳು ಬಿಜೆಪಿ ಪರ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಇವರು ಕ್ಷಮೆ ಕೇಳಬೇಕಾಗಿದೆ ಇಲ್ಲದಿದ್ದರೆ ಅವರ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದರು.ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ದೈವ ನರ್ತನ ಕಲಾವಿದರಿಗೆ ಪಿಂಚಣಿ ನೀಡುವ ಭರವಸೆ ನೀಡಿದ್ದರು ಆದರೆ ಪಿಂಚಣಿ ಭಾಗ್ಯ ಇನ್ನೂ ಬಂದಿಲ್ಲ. ಇದು ಕೂಡ ದೈವ ನರ್ತನ ಕಲಾವಿದರಿಗೆ ಮಾಡಿದ ಅವಮಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಕಟ್ಟೆ ಮಾಡಿ ಹರಕೆಯ ವಿಷಯದಲ್ಲಿ ದುಡ್ಡು ಮಾಡುವ ದಂಧೆ ನಡೆಯುತ್ತಿದೆ, ಯಕ್ಷಗಾನ, ನಾಟಕಗಳಲ್ಲಿ ಕೊರಗಜ್ಜನಿಗೆ ಅವಮಾನ ಮಾಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಈ ಎಲ್ಲಾ ಅವಮಾನವನ್ನು ಖಂಡಿಸಿ ದೈವಾರಾಧಕರ ಜಿಲ್ಲಾ ಸಮಾವೇಶ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.