ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ಮಾತು – 12 ಸೆಕೆಂಡಿಗೆ ಬಿತ್ತು ಬ್ರೇಕ್‌

ಮಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಅವರ ಭಾಷಣವನ್ನು ಮೊಟಕುಗೊಳಿಸಲಾಗಿದೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ 28ನೇ ಸಭೆಯಲ್ಲಿ ಪರಿಸರ ಸಂರಕ್ಷಣೆ ವಿಷಯವಾಗಿ ರಿಷಬ್ ಶೆಟ್ಟಿಯವರು ಭಾಷಣ ಮಾಡಿದ್ದರು. ಆದರೆ ಅವರ ಭಾಷಣ ಇಂಗ್ಲೀಷ್ ಅಥವಾ ಇನ್ನಾವುದೇ ಭಾಷೆಗೆ ಭಾಷಾಂತರವಾಗದ ಕಾರಣ ಅವರ ಭಾಷಣವನ್ನು ಮೊಟಕುಗೊಳಿಸಲಾಗಿದೆ. 

ವಿಶ್ವಸಂಸ್ಥೆಯ ಸಭೆಯಲ್ಲಿ ಯಾವುದೇ ಭಾಷೆಯಲ್ಲಿ ಭಾಷಣ ಮಾಡುವ ಅವಕಾಶವಿದೆ. ಆದರೆ ಭಾಷಣವನ್ನು ಇಂಗ್ಲೀಷ್ ಸೇರಿದಂತೆ ವಿಶ್ವಸಂಸ್ಥೆಯ ಅನುಮೋದಿಸಿದ ಕೆಲವು ಭಾಷೆಗಳಿಗೆ ಭಾಷಾಂತರ  ಮಾಡಿ ಪ್ರಸಾರ ಮಾಡುವ ಅವಕಾಶವಿದೆ. ಆದರೆ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ತರ್ಜುಮೆ ಮಾಡುವ ಅವಕಾಶವಿರಲಿಲ್ಲ. ತಾಂತ್ರಿಕ ಕಾರಣದಿಂದಾಗಿ ಅವರ ಭಾಷಣ ಭಾಷಾಂತರಗೊಂಡಿರಲಿಲ್ಲ. ಹೀಗಾಗಿ ಅವರ ಭಾಷಣಕ್ಕೆ ಬ್ರೇಕ್ ಹಾಕಲಾಗಿದ್ದು, ಕೇವಲ ಹನ್ನೆರಡು ಸೆಕೆಂಡ್​ಗಳಿಗಷ್ಟೆ ಸೀಮಿತವಾಯಿತು.

ತುಸು ವೇಗವಾಗಿ ಭಾಷಣ ಓದಲು ಆರಂಭಿಸಿದ ರಿಷಬ್, ”ನಮಸ್ಕಾರ ನಾನು ರಿಷಬ್ ಶೆಟ್ಟಿ. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ಪರಿಸರ ಸ್ವಚ್ಛತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ, ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇಶ” ಎಂದರು. ಇಷ್ಟು ಮಾತುಗಳು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡುವ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಭಾಷಣವನ್ನು ಅನಿವಾರ್ಯವಾಗಿ ಮೊಟಕುಗೊಳಿಸಬೇಕಾಯಿತು.

 

LEAVE A REPLY

Please enter your comment!
Please enter your name here