ಮಂಗಳೂರು: ಕಾಂಗ್ರೆಸ್ನ ಹಾಲಿ ಎಲ್ಲಾ ಶಾಸಕರಿಗೂ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಲಭಿಸಲಿದೆಯೇ? ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ವಿಧಾನ ಸಭೆಯ 69 ಹಾಲಿ ಕಾಂಗ್ರೆಸ್ ಶಾಸಕರ ಪೈಕಿ 8 ಮಂದಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ 8 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಶೋಧ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ದಿಲ್ಲಿಯಲ್ಲಿ ಮಾ.17ರಂದು ನಡೆದ ಕಾಂಗ್ರೆಸ್ನ ಚುನಾವಣಾ ಸಮಿತಿ ಸಭೆಯು ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಕೊನೆಯ ಮೊಹರೊತ್ತುವ ಪ್ರಕ್ರಿಯೆಯನ್ನು ಮುಂದೂಡಿದೆ.
ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರದ ಅಖಂಡ ಶ್ರೀನಿವಾಸಮೂರ್ತಿ, ಕಲಬುರಗಿ ಉತ್ತರದ ಖನೀಜ ಫಾತಿಮಾ, ಕುಂದಗೋಳದ ಕುಸುಮಾ ಶಿವಳ್ಳಿ, ಶಿಡ್ಲಘಟ್ಟದ ವಿ.ಮುನಿಯಪ್ಪ, ಪಾವಗಡದ ವೆಂಕಟರಮಣಪ್ಪ, ಲಿಂಗಸುಗೂರಿನ ಡಿ.ಎಸ್.ಹೂಲಗೇರಿ, ಅಫಜಲಪುರದ ಎಂ.ವೈ.ಪಾಟೀಲ್ ಹಾಗೂ ಹರಿಹರದ ರಾಮಪ್ಪ ಅವರಿಗೆ ವಿವಿಧ ಕಾರಣಗಳಿಂದ ಟಿಕೆಟ್ ನೀಡದಿರುವ ತೀರ್ಮಾನಕ್ಕೆ ಪಕ್ಷ ಸಭೆಯಲ್ಲಿ ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರದೇ ಇರುವುದು, ಕ್ಷೇತ್ರ ಮಟ್ಟದಲ್ಲಿ ಜನಸಂಪರ್ಕದ ಕೊರತೆಯ ಕಾರಣದಿಂದಾಗಿ ಈ ಬಾರಿ ಮತ್ತೆ ಟಿಕೆಟ್ ನೀಡಿದರೆ ಸೋಲಬಹುದೆಂಬ ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮೇಯರ್ ಸಂಪತ್ರಾಜ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ಪ್ರಸನ್ನಕುಮಾರ್ ಪರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಗೊಂದಲ ಏರ್ಪಟ್ಟಿದ್ದು ಇನ್ನೂ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಪಾವಗಡದಲ್ಲಿ ವೆಂಕಟರಮಣಪ್ಪ ಬದಲಿಗೆ ಅವರ ಪುತ್ರ ಅಥವಾ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೆಟ್ ಕೊಡಬೇಕೋ ಎಂಬ ವಿಷಯದಲ್ಲೂ ಸಹಮತ ಮೂಡಿಲ್ಲ.
ಎಂ.ವೈ.ಪಾಟೀಲ್ ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದರೆ, ಹರಿಹರದಿಂದ ರಾಮಪ್ಪ ಬದಲಿಗೆ ಕುರುಬ ಸಮುದಾಯದ ಹೊಸಬರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಖನೀಜ್ ಫಾತಿಮಾ ಹಾಗೂ ಕುಸುಮಾ ಶಿವಳ್ಳಿಗೆ ಮತ್ತೆ ಟಿಕೆಟ್ ಕೊಡಬೇಕೋ ಬೇಡವೋ ಎಂಬುದರ ಬಗ್ಗೆಯೂ ತೀರ್ಮಾನವಾಗಿಲ್ಲ. ಹೀಗಾಗಿ 8 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಟಿಕೆಟ್ ನಿರೀಕ್ಷೆಯಲ್ಲಿದ್ದ ಹಾಲಿ ಶಾಸಕರಲ್ಲಿ ಆತಂಕ ಮನೆ ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲೇ ಪಕ್ಷಕ್ಕೆ ಪ್ರಬಲ ಅಭ್ಯರ್ಥಿಗಳ ಕೊರತೆ ಉಂಟಾಗಿರುವುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದ ಒಟ್ಟು 28 ಕ್ಷೇತ್ರಗಳ ಪೈಕಿ 18 ರಿಂದ 20 ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುವ ಪ್ರಬಲ ಅಭ್ಯರ್ಥಿಗಳ ಕೊರತೆ ಕಾಂಗ್ರೆಸ್ಗೆ ತಲೆ ನೋವಾಗಿದೆ. ಮಾ.17ರ ಸಭೆಯಲ್ಲಿ ಸ್ವತಃ ರಾಹುಲ್ ಗಾಂಧಿ ಅವರು ರಾಜಧಾನಿಯಲ್ಲಿ ಕಾಂಗ್ರೆಸ್ ಈ ರೀತಿಯಾದರೆ ಹೇಗೆ? ಇಷ್ಟು ವರ್ಷಗಳ ಕಾಲ ಸ್ಥಳೀಯವಾಗಿ ಏಕೆ ಸಮರ್ಥರನ್ನು ಬೆಳೆಸಿಲ್ಲ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆ.ಆರ್.ಪುರಂ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಬೆಳೆಸಲು ಏಕೆ ಸಾಧ್ಯವಾಗಿಲ್ಲ. ಇತರೆಡೆಯೂ ಏಕೆ ಇದುವರೆಗೆ ನಮಗೆ ಸಮರ್ಥರು ದೊರೆತಿಲ್ಲ ಎಂಬುದರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದು ಮಾಸಾಂತ್ಯದ ವೇಳೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗಲಿದೆ.