ಅಮ್ಮಾ ಎನ್ನಲು ಎಲ್ಲಾ ಮರೆತಳು………

ಮಂಗಳೂರು: ಬದುಕಿನ ಪಾಠವನ್ನು ನಗು ನಗುತ್ತಾ ಕಲಿಸಿದ ಮಹಾಗುರು ಅಮ್ಮ. ಜೀವನದ ಎಷ್ಟೋ ಸೂಕ್ಷ್ಮಗಳನ್ನು ಅರ್ಥೈಸಿದ ಸಾಥ್ವಿ ಅಮ್ಮ. ಮುತ್ತಿನ ಹಿರಿಮೆಯ ಜೊತೆಗೆ ಗತ್ತಿನ ಜೀವನದ ಗರಿಯನ್ನು ಮುಡಿಗೇರಿಸಿದವಳು ಅಮ್ಮ. ಅಮ್ಮನಿಗೆ ವಯಸ್ಸಾಗುತ್ತಲೇ ಆಶ್ರಮಕ್ಕೆ ಸೇರಿಸಿ ನೆಮ್ಮದಿಯ ಬದುಕರಸಿ ದೂರ ಹೋಗುವ ಮಕ್ಕಳ ನಡುವೆ ಅಮ್ಮನ ರೂಪದ ದೇವತೆಯ ಬದುಕಲ್ಲಿ ಆರೋಗ್ಯ, ನೆಮ್ಮದಿ ಹಸಿರಾಗಿರಲಿ ಎಂದು ಅಮ್ಮನ ಜೊತೆಯಲ್ಲಿದ್ದು ಬಯಸುವ ಮಕ್ಕಳಿಗೇನು ಕೊರತೆಯಿಲ್ಲ. ಆದರೆ ಇಲ್ಲೊಬ್ಬಳು ಯುವತಿ, ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿಟ್ಟು ತನ್ನ ಜೀವ ಪಣಕ್ಕಿಟ್ಟು  ಅಮ್ಮನ ರಕ್ಷಣೆಗೆ ಮುಂದಾದ ಘಟನೆ ಪುತ್ತೂರು ತಾಲೂಕಿನ ಮಾಡಾವು ಎಂಬಲ್ಲಿ ನಡೆದಿದೆ. ಸಾಮಾನ್ಯವಾಗಿ ಹಾವು ಕಡಿದರೆ ಭಯ ಪಡುವ ಜನರ ನಡುವೆ ಶ್ರಮ್ಯ ರೈ ಎಂಬ ಯುವತಿ ಹಾವು ಕಡಿದ ತನ್ನ ಅಮ್ಮನಿಗೆ ಧೈರ್ಯ ತುಂಬಿ ಬಾಯಿಂದ ವಿಷ ಚೀಪಿ ತೆಗೆದು ಅಮ್ಮನನ್ನು ರಕ್ಷಿಸಿ ತಾಯಿ ಮಗಳ ಪ್ರೀತಿಗೆ ಹೊಸ ಭಾಷ್ಯ ಬರೆದಿದ್ದಾಳೆ. 

ಕೆಯ್ಯೂರು ಗ್ರಾಮ ಪಂಚಾಯತ್‌ ಸದಸ್ಯೆ ಮಮತಾ ರೈ ಎಂಬವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ನಾಗರ ಹಾವೊಂದು ಕಡಿದಿದೆ. ಅಮ್ಮನ ಚೀರಾಟ ಕೇಳಿ ಓಡಿ ಬಂದ ಮಗಳು ಶ್ರಮ್ಯ ರೈ ಅಮ್ಮನಿಗೆ ಧೈರ್ಯ ತುಂಬಿ ಹಿಂದೆ ಮುಂದೆ ಯೋಚಿಸದೆ ಅಮ್ಮನನ್ನು ಕಾಪಾಡುವುದೊಂದೇ ತನ್ನ ಆಧ್ಯ ಕರ್ತವ್ಯವೆಂದು ಬಗೆದು ಹಾವು ಕಚ್ಚಿದ ಶರೀರದ ಭಾಗಕ್ಕೆ ಬಾಯಿಟ್ಟು ವಿಷವನ್ನು ಸ್ವಲ್ಪ ಸ್ವಲ್ಪವಾಗಿ ಚೀಪಿ ತೆಗೆದು, ಪ್ರಥಮ ಚಿಕಿತ್ಸೆ ನೀಡಿ ಅಮ್ಮನನ್ನು ಜವರಾಯನಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ.  ಬಳಿಕ ಮಮತಾ ರೈ ಅವರನ್ನು  ಆಸ್ಪತ್ರೆಗೆ ದಾಖಲಿಸಿ  ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಈಗವರು ಚೇತರಿಸಿ ಕೊಂಡಿದ್ದಾರೆ. ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಶ್ರಮ್ಯ ರೈ ಅವರ ಸಮಯ ಪ್ರಜ್ಞೆ ಮತ್ತು ತಾಯಿ ದೇವರ ಮೇಲಿಟ್ಟ ಪ್ರೀತಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ. ಶಾಸಕ ಸಂಜೀವ ಮಠಂದೂರು ಸೇರಿದಂತೆ ಗ್ರಾಮ ಪಂಚಾಯತ್‌ ಸದಸ್ಯರು, ಮತ್ತಿತರು ಮನೆಗೆ ತೆರಳಿ ಮಮತಾ ರೈ ಅವರ ಆರೋಗ್ಯ ವಿಚಾರಿಸಿ, ಶ್ರಮ್ಯ ರೈ ಅವರ ಕರ್ತವ್ಯ ಪ್ರಜ್ಞೆ ಮತ್ತು ದಿಟ್ಟ ಸಾಹಸಕ್ಕೆ ತಲೆದೂಗಿ ಶುಭ ಹಾರೈಸಿದ್ದಾರೆ.  

LEAVE A REPLY

Please enter your comment!
Please enter your name here