ಮಂಗಳೂರು: ಮಂಗಳೂರಿನಲ್ಲಿ ಪೌರ ಕಾರ್ಮಿಕರ ಪ್ರತಿಭಟನೆ 13 ನೇ ದಿನಕ್ಕೆ ಕಾಲಿಟ್ಟಿದ್ದು ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ಎಲ್ಲೆಂದರಲ್ಲಿ ಕಸ ತುಂಬಿ ಬುದ್ದಿವಂತರ ಜಿಲ್ಲೆಯ ಸ್ಮಾರ್ಟ್ ಸಿಟಿ ಮಂಗಳೂರು ದುರ್ನಾತದ ಬೀಡಾಗಿ ಬದಲಾಗುತ್ತಿದೆ.
ನಗರದಲ್ಲಿ ಹೆಚ್ಚುತ್ತಿರುವ ಕಸದ ರಾಶಿ, ದುರ್ನಾತ, ಬಿಗಡಾಯಿಸುತ್ತಿರುವ ಮಕ್ಕಳ, ಶ್ರೀಸಾಮಾನ್ಯನ ಆರೋಗ್ಯ, ಇದನ್ನೆಲ್ಲ ಕಂಡು ರೋಸಿಹೋಗಿ ಆಕ್ರೋಶಗೊಂಡಿರುವ ಹಿರಿಯ ನಿವೃತ್ತ ಪತ್ರಕರ್ತ ನಂದಗೋಪಾಲ್ ಮಹಾನಗರ ಪಾಲಿಕೆ ಮುಂದೆ ಒಂಟಿಯಾಗಿ ಪ್ರತಿಭಟನೆ ಆರಂಭಿಸಿದ್ದಾರೆ.
ಮಂಗಳೂರಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆ ಕುರಿತು ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ, ಅಭಿಪ್ರಾಯ ವ್ಯಕ್ತವಾಗುತ್ತಿದೆಯಾದರೂ ಯಾರೂ ಹೊಸ್ತಿಲು ದಾಟಿ ಹೊರ ಬರುತ್ತಿಲ್ಲ. ತ್ಯಾಜ್ಯ ವಿಲೇವಾರಿಗೆ ಪರಿಹಾರ ಕಂಡು ಕೊಳ್ಳುವುದನ್ನು ಬಿಟ್ಟು ಸ್ಟ್ರೀಟ್ ಫುಡ್ ಫೆಸ್ಟಿವಲ್ ಆಯೋಜಿಸಿದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ನಂದ ಗೋಪಾಲ್ ತನ್ನ ಮನೆಯ ತ್ಯಾಜ್ಯವನ್ನು ಮುಂದಿಟ್ಟು ಮಹಾನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ದಂಗೆ ಏಳುವ ದಿನ ದೂರವಿಲ್ಲ.