ಮಂಗಳೂರು: ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿ ಕೇಂದ್ರ ಸಚಿವಾಲಯ ಮಾ.24 ಶುಕ್ರವಾರದಂದು ಅಧಿಸೂಚನೆ ಹೊರಡಿಸಿದೆ.
ಸೂರತ್‌ನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಮೋದಿ ಉಪನಾಮೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2 ವರ್ಷಗಳ ಶಿಕ್ಷೆ ವಿಧಿಸಿದ್ದು ಅಪರಾಧ ಸಾಬೀತಾದ ದಿನಾಂಕದಿಂದ ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ರಾಹುಲ್ ಗಾಂಧಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕೋಲಾರದಲ್ಲಿ, ನೀರವ್ ಮೋದಿಯಾಗಿರಲಿ, ಲಲಿತ್ ಮೋದಿಯಾಗಿರಲಿ, ಅಥವಾ ನರೇಂದ್ರ ಮೋದಿಯಾಗಿರಲಿ ಎಲ್ಲಾ ಕಳ್ಳರ ಸರ್‌ನೇಮ್ ಮೋದಿ ಎಂದಾಗಿರುವುದೇಕೆ ಎಂದು ಪ್ರಶ್ನಿಸಿದ್ದರು. ಈ ಹಿನ್ನಲೆಯಲ್ಲಿ ಗುಜರಾತ್‌ನ ಮಾಜಿ ಸಚಿವ ಶಾಸಕ ಪೂರ್ಣೇಶ್ ಮೋದಿ ಎಂಬವರು ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಕೇಸು ದಾಖಲಿಸಿದ್ದರು.