ಮಂಗಳೂರು: ಭೂತದ ಭಯದಿಂದಾಗಿ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬೇಗನ್ಕೋದರ್ ರೈಲು ನಿಲ್ದಾಣ ಬರೋಬ್ಬರಿ 42 ವರ್ಷಗಳಿಂದ ಬಂದ್ ಆಗಿದೆ.
1960ರ ದಶಕದಲ್ಲಿ ಪುರುಲಿಯಾ ಜಿಲ್ಲೆಯ ಬೇಗನ್ಕೋದರ್ ರೈಲು ನಿಲ್ದಾಣ ಜನನಿಬಿಡ ನಿಲ್ದಾಣವಾಗಿತ್ತು. ಸಂತಾಲ್ ರಾಣಿ ಲಚನ್ ಕುಮಾರಿಯವರ ಪ್ರಯತ್ನದಿಂದ ಈ ನಿಲ್ದಾಣದ ನಿರ್ಮಾಣವಾಗಿತ್ತು. ಇಲ್ಲಿ ರೈಲು ನಿಲ್ದಾಣ ನಿರ್ಮಾಣಗೊಂಡ ಬಳಿಕ ಇಲ್ಲಿನ ಜನ ಬಹಳಷ್ಟು ಸಂತೋಷಗೊಂಡಿದ್ದರು. ಆದರೆ, ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ.
1967ರಲ್ಲಿ ಸ್ಟೇಷನ್ ಮಾಸ್ಟರ್ ರೈಲ್ವೇ ಹಳಿಯಲ್ಲಿ ತಾನು ಭೂತವನ್ನು ನೋಡಿರುವುದಾಗಿ ಹೇಳಿಕೊಂಡಿದ್ದ. ಭೂತ ಬಿಳಿ ಸೀರೆಯಲ್ಲಿದೆ ಮತ್ತದು ರಾತ್ರಿಯಲ್ಲಿ ರೈಲ್ವೆ ಹಳಿಯಲ್ಲಿ ತಿರುಗಾಡುತ್ತದೆ ಎಂದು ತನ್ನ ಆತಂಕವನ್ನು ವ್ಯಕ್ತಪಡಿಸಿದ್ದ. ಈ ವಿಷಯ ಮಿಂಚಿನ ವೇಗದಲ್ಲಿ ಊರು ತುಂಬಾ ಹರಡಿತ್ತು. ಇದಾದ ಬಳಿಕ ಹಲವರು ಬಿಳಿ ಸೀರೆಯಲ್ಲಿ ದೆವ್ವ ಕಂಡಿರುವುದಾಗಿ ಹೇಳಿಕೊಂಡಿದ್ದರು. ಈ ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿಯೊಬ್ಬಳು ಭೂತವಾಗಿ ಬಂದಿದ್ದಾಳೆ ಎಂದು ಜನರಾಡತೊಡಗಿದರು. ಈ ಊಹಾಪೋಹಗಳನ್ನು,ಕಟ್ಟು ಕಥೆಯೆಂದು ರೈಲ್ವೆ ಇಲಾಖೆ ನಂಬಲು ನಿರಾಕರಿಸಿತು. ಇದಾದ ಕೆಲವು ದಿನಗಳ ನಂತರ ಸ್ಟೇಷನ್ ಮಾಸ್ಟರ್ ಹಾಗೂ ಆತನ ಕುಟುಂಬ ಸದಸ್ಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ರೈಲು ನಿಲ್ದಾಣದ ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಿದರು. ಮುಂದೆ ಜನರು ಈ ನಿಲ್ದಾಣದಿಂದ ಪ್ರಯಾಣ ಬೆಳಸುವುದನ್ನು ನಿಲ್ಲಿಸಿಯೇ ಬಿಟ್ಟರು. ಕೊನೆಗೊಂದು ದಿನ ರೈಲ್ವೇ ಇಲಾಖೆ ಈ ನಿಲ್ದಾಣವನ್ನೇ ಬಂದ್ ಮಾಡಿತು. 2009ರಲ್ಲಿ ಆಗಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಉಪಕ್ರಮದ ಮೇರೆಗೆ ಈ ನಿಲ್ದಾಣವನ್ನು ತೆರೆಯಲು ನಿರ್ಧರಿಸಲಾಯಿತು.ಮಾತ್ರವಲ್ಲ ಆ ಬಳಿಕ ಇಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆ ಆರಂಭಗೊಂಡಿತು. ಈಗ ಈ ನಿಲ್ದಾಣ ನಿಲುಗಡೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದ್ದು ಖಾಸಗಿ ಕಂಪನಿಯಿಂದ ನಿರ್ವಹಿಸಲ್ಪಡುತ್ತಿದೆ. ವಿಶೇಷವೆಂದರೆ ದೆವ್ವದ ಭಯದಿಂದ ಇಂದಿಗೂ ಇಲ್ಲಿ ರೈಲ್ವೆ ಇಲಾಖೆಯಿಂದ ಒಬ್ಬನೇ ಒಬ್ಬ ನೌಕರನನ್ನು ನಿಯೋಜನೆಗೊಳಿಸಲಾಗಿಲ್ಲ. ಪ್ಯಾರಾನಾರ್ಮಲ್ ಅಧ್ಯಯನ ತಂಡವೊಂದು ಆಗಮಿಸಿ ಇಲ್ಲಿ ಯಾವುದೇ ಭೂತ ಇಲ್ಲವೆಂದು ಹೇಳಿದರೂ ಇಲ್ಲಿನ ಜನರು ಮಾತ್ರ ಅದೇ ಭೂತಕಾಲದ ಗುಂಗಿನಲ್ಲಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ