ಮಂಗಳೂರು (ರಾಜ್ ಕೋಟ್): ರಾಜ್ ಕೋಟ್ ನ ಹೇಮುಬಾಯಿ (38) ಮತ್ತು ಹಂಸಾಬೆನ್ (35) ಮೂಢನಂಬಿಕೆಯ ತಾಂತ್ರಿಕ ವಿಧಿಗಳ ಹೆಸರಿನಲ್ಲಿ ಸಾವನ್ನು ಆಹ್ವಾನಿಸಿಕೊಂಡಿದ್ದಾರೆ. ಅತಿಂದ್ರೀಯ ಸಂಬಂಧಿತ ಬಲಿ ಆಚರಣೆಯಲ್ಲಿ ದಂಪತಿಗಳು ಗಿಲೋಟಿನ್ ನಂತಹ ಸಾಧನ ಬಳಸಿ ತಮ್ಮ ರುಂಡಗಳು ಹೋಮಕುಂಡಕ್ಕೆ ಬೀಳುವಂತೆ ಸ್ವಯಂ ಶಿರಚ್ಚೇಧ ಮಾಡಿಕೊಂಡಿದ್ದಾರೆ.
ದಂಪತಿ ತಾನೇ ತಯಾರಿಸಿದ್ದ ಗಿಲೋಟಿನ್ ರೀತಿಯ ಸಾಧನದಡಿ ತಮ್ಮ ತಲೆಗಳನ್ನು ಇರಿಸುವ ಮೊದಲು ಹೋಮಕೊಂಡವನ್ನು ಸಿದ್ಧಪಡಿಸಿಕೊಂಡಿದ್ದರು. ಹಗ್ಗವನ್ನು ಕೈಬಿಟ್ಟ ತಕ್ಷಣ ಕಬ್ಬಿಣದ ಭಾರವಾದ ಬ್ಲೆಡ್ ಅವರ ಕುತ್ತಿಗೆಗೆ ಬಿದ್ದು ರುಂಡ-ಮುಂಡವನ್ನು ಬೇರ್ಪಡಿಸಿದೆ. ತಮ್ಮ ಹೊಲದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ನಡೆಸಿದ ಬಳಿಕ ಪ್ರದಾನ ದೇವತೆಯನ್ನು ತೃಪ್ತಗೊಳಿಸಲು ತಮ್ಮ ರುಂಡಗಳನ್ನೇ ಕತ್ತರಿಸಿಕೊಂಡಿದ್ದಾರೆ. ವಿಂಛಯಾ ಗ್ರಾಮದ ಪೊಲೀಸ್ ಅಧಿಕಾರಿ ಇಂದ್ರಜಿತ್ ಸಿನ್ಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪತ್ನಿಯ ರುಂಡ ಹೋಮಕುಂಡದಲ್ಲಿದ್ದರೆ, ಪತಿಯ ರುಂಡ ಗುಡಿಸಲಿನ ಮೂಲೆಯಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪತ್ರವೊಂದು ದೊರೆತಿದ್ದು, ಅದರಲ್ಲಿ ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಸಂಬಂಧಿಕರಿಗೆ ಕೇಳಿಕೊಳ್ಳಲಾಗಿದೆ. ದಂಪತಿಗಳ ಮಕ್ಕಳಿಬ್ಬರು ಸಂಬಂಧಿಕರ ಮನೆಯಲ್ಲಿದ್ದು ಓದುತ್ತಿದ್ದಾರೆ.