ಮಂಗಳೂರು: ಯುವತಿಯರ ಸ್ನಾನದ ದೃಶ್ಯವನ್ನು ಸೆರೆಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಕುಂದಾಪುರ ಮೂಲದ ರಘುರಾಮ್ ಎಂಬಾತನನ್ನು ಬೆಂಗಳೂರಿನ ಹೆಚ್.ಎ.ಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ 22 ವರ್ಷದ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ನಿಸರ್ಗ ಗಾರ್ಡನ್ ನಲ್ಲಿ ಕ್ಯಾಟರಿಂಗ್ ನಡೆಸುತ್ತಿದ್ದ ರಘುರಾಮ್ ಪಶ್ಛಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮೂವರು ನಿಸರ್ಗ ಗಾರ್ಡನ್ನ ಮನೆಯಲ್ಲಿ ಒಂದಾಗಿ ಉಳಿದುಕೊಂಡಿದ್ದರು. ಮೇ 12 ರಂದು ದೂರುದಾರೆ ಯುವತಿ ಸ್ನಾನ ಮಾಡುವ ವೇಳೆ ಆರೋಪಿ ಬಾತ್ರೂಮಿನ ಗೋಡೆಯ ಮೇಲಿಂದ ಸ್ನಾನ ಮಾಡುವ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ. ಇದನ್ನು ನೋಡಿದ ಮತ್ತೋರ್ವ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಇಬ್ಬರೂ ಯುವತಿಯರು ಸೇರಿ ರಘುರಾಮನಿಂದ ಮೊಬೈಲ್ ಕಸಿದು ಪರಿಶೀಲಿಸದಾಗ ಇಬ್ಬರು ಯುವತಿಯರ ಸ್ನಾನದ ದೃಶ್ಯ ಅದರಲ್ಲಿ ಪತ್ತೆಯಾಗಿದೆ.
ನಾನು ಹೇಳಿದಂತೆ ಕೇಳದಿದ್ದರೆ ವಿಡಿಯೋ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಹಾಕಿದ್ದು ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.