ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಬಿ.ಎಲ್.ಸಂತೋಷ್ ಸಭೆ-ನಳಿನ್ ಪರ ಬ್ಯಾಟಿಂಗ್-ಬಂಡಾಯ ಕಾಮನ್

ಮಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಬಿಜೆಪಿಯ ಹೀನಾಯ ಸೋಲಿನ ಬಳಿಕ ಕಟೀಲ್ ಬಗ್ಗೆ ಕರಾವಳಿಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿತ್ತು. ರಾಜ್ಯಾಧ್ಯಕ್ಷರ ಬದಲಾವಣೆ ಮಾತ್ರವಲ್ಲ ಮುಂದಿನ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ಇಲ್ಲ ಎನ್ನುವ ಸುದ್ದಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ನಡುವೆ ಹರಿದಾಡಿದ್ದಲ್ಲದೆ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಆದರೆ ನಾಲ್ಕು ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಜಿಲ್ಲಾ ಚುನಾವಣಾ ಸಮಿತಿ ಸಭೆಯಲ್ಲಿ ಸಂತೋಷ್ ನಳಿನ್ ಪರ ಮಾತನಾಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಎಲ್ಲರೂ ರಾಜೀನಾಮೆ ಕೇಳಿದರೆ ಅವನೇನು ಮಾಡಬೇಕು ಅವ ಪಕ್ಷದ ಕೆಲಸ ಚೆನ್ನಾಗಿಯೇ ಮಾಡಿದ್ದಾನೆ ಎಂದು ಮಾತನಾಡಿರುವುದು ಪಕ್ಷದ ಅಂತರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ಮಾತ್ರವಲ್ಲ, ಪಕ್ಷದ ರಾಜ್ಯಾಧ್ಯಕ್ಷರ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿದ ವಿಷಯವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸ್ತಾಪಿಸಿ ಘಟನೆಯ ಕುರಿತು ಯಾವ ಶಾಸಕರು ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿ ಎಲ್ ಸಂತೋಷ್ ಶಾಸಕರು ಬಿಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೀವೇನು ಮಾಡಿದ್ದೀರಿ ಎಂದು ಸ್ವಲ್ಪ ಖಾರವಾಗಿಯೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇನ್ನು ಬಂಡಾಯದ ವಿಚಾರದಲ್ಲಂತೂ ಪುತ್ತೂರು ಯಾವ ಸೀಮೆಯ ಲ್ಯಾಬೋರೇಟರಿ? ಪುತ್ತೂರಿನಲ್ಲಿ ಹಿಂದಿನಿಂದಲೂ ಬಂಡಾಯವಿತ್ತು, ಹಿಂದೆ ರಾಮ ಭಟ್, ಶಕುಂತಲಾ ಶೆಟ್ಟಿ, ಈಗ ಅರುಣ್ ಕುಮಾರ್ ಪುತ್ತಿಲ ಬಂಡಾಯವೆದ್ದಿದ್ದಾರೆ. ಇದರಲ್ಲೇನು ನಷ್ಟ? ಇಂತಹದ್ದೆಲ್ಲ ಆಗುತ್ತೆ ಹೋಗುತ್ತೆ ಎಂದು ಹೇಳಿದ್ದಾರೆನ್ನಲಾಗಿದೆ.
ಕೆಲವು ಮಾಧ್ಯಮಗಳಲ್ಲಿ ಸಂಸದರ ಬದಲಾವಣೆ ಬಗ್ಗೆ ಗಮನಿಸಿದ್ದೇನೆ ಮೇಲಿಂದ ನಾನು ಮೂರನೇ ಸ್ಥಾನದಲ್ಲಿದ್ದೇನೆ. ಬದಲಾವಣೆ ಮಾಡುವುದಕ್ಕೆ ನಾನಿದ್ದೀನಲ್ಲ ಎಂದು ಕಟೀಲ್ ಸೇರಿದಂತೆ 12 ಸಂಸದರಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿ, ಲೋಕಸಭಾ ಚುನಾವಣೆಗೆ ನಳಿನ್ ಕುಮಾರ್ ಕಟೀಲ್ ಬದಲಾವಣೆ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಮಾತ್ರವಲ್ಲ ಲೋಕಸಭಾ ಚುನಾವಣೆವರೆಗೆ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎನ್ನುವ ಸೂಚನೆ ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸಭಾ ಚುನಾವಣೆಯ ಬಳಿಕ ನಿರಾಶೆಯ ಮೂಡ್ ನಲ್ಲಿದ್ದ ನಳಿನ್ ಕುಮಾರ್ ಕಟೀಲ್ ಬಣ ಬಿ ಎಲ್ ಸಂತೋಷ್ ಹೇಳಿಕೆಯ ಬಳಿಕ ಹೊಸ ಹುಮ್ಮಸಿನಲ್ಲಿದ್ದರೆ, ವಿರೋಧಿ ಬಣದಲ್ಲಿ ಮೋಡ ಕವಿದ ವಾತಾವರಣವಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಪಕ್ಷದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಬಗ್ಗೆ ಪಕ್ಷದ ಒಂದು ವಲಯದಲ್ಲಿ ಅಸಮಾಧಾನ ಮಡುಗಟ್ಟಿದೆ. 2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಂತೋಷ್ ಅವರ ಕಾರ್ಯತಂತ್ರವೇ ಕಾರಣ. ಚುನಾವಣಾ ವೇಳೆ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಯಾವುದೇ ವಿಚಾರದಲ್ಲೂ ರಾಜ್ಯದ ಘಟಾನುಘಟಿ ನಾಯಕರ ಸಲಹೆಗಳಿಗೂ ಅವರು ಕಿಮ್ಮತ್ತು ನೀಡುತ್ತಿರಲಿಲ್ಲ. ಹೀಗಾಗಿ 2018 ರಲ್ಲಿ ಬಹುಮತ ಬರುವುದು ತಪ್ಪಿ ಹೋಯಿತು. 2023ರಲ್ಲಿ ಪಕ್ಷ ಸೋತು ಸುಣ್ಣವಾಯಿತು. ಸಂಘಟನೆಯು ಅತ್ಯಂತ ದುರ್ಬಲವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ನಾಯಕರೊಬ್ಬರು ತಿಳಿಸಿದ್ದಾರೆ. ಈ ನಡುವೆ ಲೋಕಸಭಾ ಚುನಾವಣೆ ಬಗ್ಗೆ ತಯಾರಿ ನಡೆಸಲು ಸಂತೋಷ್ ಅವರು ಬೆಂಗಳೂರಿನಲ್ಲಿ ಕರೆದಿದ್ದ ಸಭೆಗೆ ಬೆಂಗಳೂರು ನಗರದ ಶಾಸಕರು ಹಾಜರಾಗಿರಲಿಲ್ಲ ಎಂದು ಮೂಲಗಳು ಹೇಳಿದೆ.

LEAVE A REPLY

Please enter your comment!
Please enter your name here