ಮಂಗಳೂರು: ಹೋರಿಝೋನ್ ಸ್ಟುಡಿಯೋ ಸಂಸ್ಥೆ ನಿರ್ಮಾಣದ ಇನ್ನೂ ಹೆಸರಿಡದ ಪ್ರೊಡಕ್ಷನ್ ನಂಬರ್ 2 ಚಿತ್ರದ ಮುಹೂರ್ತ ಜೂನ್10ರಂದು ಕುತ್ತಾರಿನ ಕೊರಗಜ್ಜನ ಗುಡಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ನಡೆಯಿತು. ಕೆಲ ದಿನಗಳ ಹಿಂದೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಇದೇ ಕ್ಷೇತ್ರಕ್ಕೆ ಭೇಟಿ ನೀಡಿ ಮುಹೂರ್ತವನ್ನು ಕೊರಗಜ್ಜನ ಕ್ಷೇತ್ರದಲ್ಲಿ ನಡೆಸುವುದಾಗಿ ಹರಕೆ ಹೊತ್ತಿದ್ದರು. ಆದರೆ ಚಿತ್ರತಂಡದವರಿಗೆ ಮಂಗಳೂರಿಗೆ ಬರುವುದು ಕಷ್ಟ ಎಂದೆನಿಸಿದಾಗ ಬೆಂಗಳೂರಿನಲ್ಲಿಯೇ ಚಿತ್ರದ ಮಹೂರ್ತ ನಡೆಸಲು ತೀರ್ಮಾನಿಸಿ ದಿನವನ್ನೂ ನಿಗದಿಪಡಿಸಿದ್ದರು.
ಆದರೆ ಅದೇ ದಿನ ತಂಡದಲ್ಲಿರುವ ಪ್ರಮುಖರಿಗೆ ಅನಾರೋಗ್ಯ ಕಾಡಿದ್ದು ಮುಹೂರ್ತ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ತಂಡ ಈ ಹಿಂದೆ ಹೊತ್ತ ಹರಕೆಯಂತೆ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿಯೇ ಮುಹೂರ್ತ ನಡೆಸುವುದಾಗಿ ತೀರ್ಮಾನಿಸಿ ಸಾಂಕೇತಿಕವಾಗಿ ಮುಹೂರ್ತವನ್ನು ನಡೆಸಿದೆ. ದೈವಲೀಲೆಯಂತೆ ಮುಹೂರ್ತ ನೆರವೇರಿಸಿದ್ದೇವೆ ಎಂದು ಚಿತ್ರದ ನಿರ್ದೇಶಕ ಆರ್ಯನ್ ಹೇಳಿದ್ದಾರೆ.