ಎಫ್‌ಬಿ ನಕಲಿ ಖಾತೆಯಿಂದ ಸೌದಿ ದೊರೆಗೆ ಅವಹೇಳನೆ-ಮಂಗಳೂರು ನಿವಾಸಿಗೆ ಸೌದಿಯಲ್ಲಿ ಜೈಲು ಶಿಕ್ಷೆ-ತನಿಖೆಗೆ ಸಹಕರಿಸದಿದ್ದಲ್ಲಿ ಎಫ್‌ಬಿ ನಿಷೇಧಿಸುತ್ತೇವೆ ಎಂದ ಹೈಕೋರ್ಟ್

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ(ಎನ್‌ಆರ್‌ಸಿ) ಬೆಂಬಲಿಸಿದ ಕಾರಣಕ್ಕೆ ಮಂಗಳೂರು ಮೂಲದ ಶೈಲೇಶ್‌ ಕುಮಾರ್‌ ಹೆಸರಿನಲ್ಲಿ ಅನಾಮಿಕರು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ ಪ್ರಕರಣದ ತನಿಖೆಗೆ ಸೂಕ್ತ ಸಹಕಾರ ನೀಡಬೇಕು. ಇಲ್ಲ​ದಿ​ದ್ದ​ರೆ ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಾಚರಣೆ ಬಂದ್‌ ಮಾಡಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಅನಾಮಿಕರು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್‌ ಹಾಕಿದ ಪ್ರಕರಣ ಸಂಬಂಧ ಸೌದಿ ಅರೇಬಿಯಾ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಅಲ್ಲಿನ ಜೈಲಿನಲ್ಲಿರುವ ಬಿಕರ್ನಕಟ್ಟೆ ನಿವಾಸಿ ಶೈಲೇಶ್‌ ಕುಮಾರ್‌ ಎಂಬವರ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ಎಚ್ಚರಿಕೆ ನೀಡಿದೆ.

ಘಟನೆ ಕುರಿತು ಸೂಕ್ತ ಮಾಹಿತಿಯನ್ನೊಳಗೊಂಡ ವರದಿಯನ್ನು ಫೇಸ್‌ಬುಕ್‌ ಸಂಸ್ಥೆ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭಾರತೀಯ ಪ್ರಜೆಯು ಸುಳ್ಳು ಪ್ರಕರಣದಲ್ಲಿ ವಿದೇಶದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದೆ.

ಮಂಗಳೂರು ಪೊಲೀಸರು ಸಹ ಈ ಪ್ರಕರಣ ಸಂಬಂಧ ಸಮರ್ಪಕ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌, ”ತನಿಖೆಗೆ ಏಕೆ ಸಹಕಾರ ನೀಡುತ್ತಿಲ್ಲ?” ಎಂದು ಫೇಸ್‌ಬುಕ್‌ ಪರ ವಕೀಲರನ್ನು ಪ್ರಶ್ನಿಸಿದರು. ”ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ನಮಗೆ ಸರಿಯಾದ ಮಾಹಿತಿ ಇಲ್ಲ” ಎಂಬ ಹಾರಿಕೆಯ ಉತ್ತರ ನೀಡಿದ ವಕೀಲರ ಮೇಲೆ ಸಿಟ್ಟಿಗೆದ್ದ ನ್ಯಾಯಮೂರ್ತಿ, ”ಪ್ರಕರಣದ ತನಿಖೆಗೆ ಸೂಕ್ತ ಸಹಕಾರ ನೀಡದಿದ್ದರೆ ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಾಚರಣೆಯನ್ನೇ ನಿಲ್ಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಮಂಗಳೂರಿನ ಬಿಕರ್ನಕಟ್ಟೆಯ ಶೈಲೇಶ್‌ ಕುಮಾರ್‌ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್‌ಕೋಬರ್‌ ನಲ್ಲಿ ಉದ್ಯೋಗದಲ್ಲಿದ್ದರು. ಕೇಂದ್ರ ಸರಕಾರ ರೂಪಿಸಿದ ಸಿಎಎ ಮತ್ತು ಎನ್‌ಆರ್‌ಸಿ ಕಾಯಿದೆ ಬೆಂಬಲಿಸಿ 2019ರಲ್ಲಿ ಸೌದಿ ಅರೇಬಿಯಾದಲ್ಲಿ ಶೈಲೇಶ್‌ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದರು. ಇದರಿಂದ ಅವರಿಗೆ ಅನಾಮಿಕರಿಂದ ಬೆದರಿಕೆ ಬಂದಿತ್ತು. ಹಾಗಾಗಿ ತಮ್ಮ ಫೇಸ್‌ಬುಕ್‌ ಖಾತೆಯನ್ನು ಶೈಲೇಶ್‌ ರದ್ದು ಮಾಡಿದ್ದರು.

ಆದರೆ 2020ರ ಫೆಬ್ರವರಿಯಲ್ಲಿ ಶೈಲೇಶ್‌ ಕುಮಾರ್‌ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಆತನ ಜಾತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು. ಹೀಗಾಗಿ ಅಲ್ಲಿನ ಪೊಲೀಸರು ಶೈಲೇಶ್‌ನನ್ನು ಬಂಧಿಸಿದ್ದರು.

LEAVE A REPLY

Please enter your comment!
Please enter your name here