ಕಾಲೇಜು ವಿದ್ಯಾರ್ಥಿಗಳಿಂದ ನಿರ್ವಾಹಕನೊಂದಿಗೆ ಬಸ್ಸಿನಲ್ಲಿ ಗಲಾಟೆ – ಮೂವರ ಬಂಧನ

ಮಂಗಳೂರು: ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಮುಂದೆ ಹೋಗಿ ಎಂದು ಕಂಡಕ್ಟರ್ ತಳ್ಳಿದ ಎಂಬ ಕಾರಣಕ್ಕಾಗಿ ಬಸ್ಸು ನಿಲ್ಲಿಸಿ ದಾಂಧಲೆ ಮಾಡಿದ ಘಟನೆ ಜೂ.17 ರಂದು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.18 ರಂದು ಬಸ್ಸಿನ ನಿರ್ವಾಹಕ ದೂರು ದಾಖಲಿಸಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿಂದ ಮೂಡಿಗೆರೆಗೆ ಸಂಚರಿಸುವ ಸರಕಾರಿ ಬಸ್ಸಿಗೆ ಉಜಿರೆಯಲ್ಲಿ ವಿದ್ಯಾರ್ಥಿಗಳು ಹತ್ತಿದ್ದು ಬಸ್ ನಿರ್ವಾಹಕ ವಿದ್ಯಾರ್ಥಿಗಳನ್ನು ಮುಂದೆ ಹೋಗುವಂತೆ ತಳ್ಳಿದ ಎಂಬ ವಿಚಾರದಲ್ಲಿ ವಿದ್ಯಾರ್ಥಿಗಳ ಮತ್ತು ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿಚಾರವನ್ನು ವಿದ್ಯಾರ್ಥಿಗಳು ಚಾರ್ಮಾಡಿ ಯುವಕರಿಗೆ ತಿಳಿಸಿ ಬಸ್ ಅಡ್ಡ ಹಾಕುವಂತೆ ಸೂಚಿಸಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರು ಈ ವಿಚಾರವನ್ನು ಧರ್ಮಸ್ಥಳ ಪೊಲೀಸರಿಗೆ ತಿಳಿಸಿದ್ದು, ತಕ್ಷಣ ಧರ್ಮಸ್ಥಳ ಠಾಣೆ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬಸ್ಸು ನಿಲ್ಲಿಸುವಂತೆ  ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಬಸ್‌ ತಡೆದ ಚೆಕ್ ಪೋಸ್ಟ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿದ್ದರೂ, ಅಲ್ಲಿಗೆ ಆಗಮಿಸಿದ ಯುವಕರು ಬಸ್ಸು ನಿರ್ವಾಹಕನ ಜೊತೆ ಜಗಳಕ್ಕಿಳಿದಿದ್ದಾರೆ. ಇದನ್ನೆಲ್ಲ ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ಯುವಕರು ಹಲ್ಲೆಗೆ ಮುಂದಾಗಿದ್ದು, ನಿರ್ವಾಹಕನ ಪರ ಮಾತನಾಡಿದ ಪ್ರಯಾಣಿಕರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಬಸ್ ನಿರ್ವಾಹಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮೇಗಿನ ಮನೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮಹಮ್ಮದ್ ಶಬೀರ್ (21), ಮಹಮ್ಮದ್ ಮೆಹರೂಫ್ (22), ಪಾಂಡಿಕಟ್ಟೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಮೊಹಮ್ಮದ್ ಮುಬಶೀರ್ (23) ಎಂಬವರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

LEAVE A REPLY

Please enter your comment!
Please enter your name here