ಆಹಾರ ಧಾನ್ಯಗಳ ಹರಾಜಿನಲ್ಲಿ ರಾಜ್ಯಗಳು ಪಾಲ್ಗೊಳ್ಳುವಂತಿಲ್ಲ – ಕೇಂದ್ರ ಸರಕಾರ

ಮಂಗಳೂರು (ಹೊಸದಿಲ್ಲಿ): ಕೇಂದ್ರ ಸರಕಾರ 15 ಲಕ್ಷ ಟನ್ ಗೋಧಿಯನ್ನು ಈ ತಿಂಗಳು ಹರಾಜು ಹಾಕಲು ನಿರ್ಧರಿಸಿದೆ. ಆದರೆ ಕೇಂದ್ರ ಸರಕಾರ ಹೊಂದಿರುವ ಆಹಾರ ಧಾನ್ಯದ ಬಿಡ್ಡಿಂಗ್ ನಲ್ಲಿ ರಾಜ್ಯ ಸರಕಾರಗಳು ಪಾಲ್ಗೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿರುವುದು ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ದೇಶಾದ್ಯಂತ ತನ್ನ ಗೋದಾಮ್ ಗಳಲ್ಲಿ 72.5 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಹೊಂದಿದೆ. ಹಣದುಬ್ಬರ ತಡೆಗೆ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳಲ್ಲಿ, ಈ ಹೆಚ್ಚುವರಿ ಸಂಗ್ರಹವನ್ನು ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡೋದು ಕೂಡ ಸೇರಿದೆ. ಆದರೆ ಆಹಾರ ಧಾನ್ಯ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ಸಂಗ್ರಹಿಸಿಡಬಹುದಾದ ಧಾನ್ಯಗಳ ಪ್ರಮಾಣದ ಮೇಲೆ ಮಿತಿ ವಿಧಿಸಲಾಗಿದೆ. ಜೂ.13 ರಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದಂತೆ ಈ ಆಹಾರ ಧಾನ್ಯಗಳ ಮಾರಾಟಕ್ಕೆ ಭಾರತದ ಆಹಾರ ನಿಗಮ ನಡೆಸುವ ಹರಾಜಿನಲ್ಲಿ ರಾಜ್ಯ ಸರಕಾರಗಳು ಪಾಲ್ಗೊಳ್ಳುವಂತಿಲ್ಲ.

ಕರ್ನಾಟಕದ ಅಂತಹ ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಕೇಂದ್ರದ ನಡೆಯನ್ನು ಟೀಕಿಸಿವೆ. ಕೇಂದ್ರ ಸರಕಾರ ವಿವಿಧ ಸಚಿವಾಲಯಗಳ ಸಲಹೆ ಪಡೆದು ಹೊಸ ಆಹಾರ ನೀತಿ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಜೂ.8 ರಂದು ನಡೆದ ಅಂತರ ಸಚಿವಾಲಯ ಸಮಿತಿ ಸಭೆಯಲ್ಲಿ ರಾಜ್ಯಗಳಿಗೆ ಆಹಾರ ಧಾನ್ಯ ಮಾರಾಟ ಮಾಡುವ ಕ್ರಮವನ್ನು ಕೈ ಬಿಡಲು ಶಿಫಾರಸು ಮಾಡಲಾಗಿತ್ತು ಎನ್ನಲಾಗಿದೆ.

ಮಾರುಕಟ್ಟೆ ಹಸ್ತಕ್ಷೇಪ ಮತ್ತು ಬೆಲೆ ನಿಯಂತ್ರಣಕ್ಕಾಗಿ ಸಾಕಷ್ಟು ಆಹಾರ ಧಾನ್ಯ ದಾಸ್ತಾನು ಇಟ್ಟುಕೊಳ್ಳುವ ಅಗತ್ಯ ಇರುವುದರಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯ ಸರಕಾರಗಳಿಗೆ ಅಕ್ಕಿ ಹಾಗೂ ಗೋಧಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here