ಮಂಗಳೂರು: ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗಿನ ಹೊರೆ ಕಡಿಮೆ ಮಾಡಲು ಸರಕಾರ ಮುಂದಾಗಿದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಬ್ಯಾಗ್ 1.5 ಕೆಜಿ ಯಿಂದ 5 ಕೆಜಿ ಮಾತ್ರವೇ ಇರಬೇಕೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿತಗೊಳಿಸುವ ಉದ್ದೇಶದಿಂದ 1996ರಲ್ಲಿ ನೇಮಿಸಿದ್ದ ಯಶ್ ಪಾಲ್ ವರ್ಮಾ ಸಮಿತಿ ಸಲ್ಲಿಸಿದ ಹೊರೆ ಇಲ್ಲದ ಕಲಿಕಾ ವರದಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಅಧ್ಯಯನ ವರದಿ ಹಾಗೂ ಕೇಂದ್ರ ಸರ್ಕಾರ ಶಾಲಾ ಬ್ಯಾಗ್ ನೀತಿ 2020ರ ಆಧಾರದ ಮೇಲೆ ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಕಡಿಮೆ ಮಾಡಲಾಗಿದೆ.
ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಬ್ಯಾಗ್ ತೂಕ 1 ಮತ್ತು 2ನೇ ತರಗತಿ ಮಕ್ಕಳಿಗೆ 1.5 ರಿಂದ 2 ಕೆ.ಜಿ, 3 ರಿಂದ 5ನೇ ತರಗತಿ ಮಕ್ಕಳಿಗೆ 2 ರಿಂದ 3 ಕೆ.ಜಿ, 6 ರಿಂದ 8ನೇ ತರಗತಿ 3 ರಿಂದ 4 ಕೆ.ಜಿ ಹಾಗೂ 9 ರಿಂದ 10 ನೇ ತರಗತಿ ಮಕ್ಕಳಿಗೆ 4 ರಿಂದ 5 ಕೆಜಿ ವರೆಗೆ ನಿಗದಿ ಮಾಡಲಾಗಿದೆ. ಮಕ್ಕಳು ಶಾಲೆಗಳಿಗೆ ಅಗತ್ಯ ಇರುವ ಕಲಿಕಾ ಸಾಮಗ್ರಿಗಳನ್ನು ಮಾತ್ರ ತರುವಂತೆ ಶಿಕ್ಷಕರು ನೋಡಿಕೊಳ್ಳಬೇಕು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಶಾಲೆಯಲ್ಲಿ ಒದಗಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಶಾಲೆ ಮತ್ತು ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.