ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಸ್ವಪಕ್ಷೀಯ ನಾಯಕರ ವಿರುದ್ಧವೇ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲಾಗದವರು ನಮಗೆ ಮಾರ್ಗದರ್ಶನ ಮಾಡ್ತಿದ್ರು ಎಂಬ ರೇಣುಕಾಚಾರ್ಯರ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿರುವ ಕಾಂಗ್ರೆಸ್ ದುಡಿಯದೇ, ಬೆವರು ಹರಿಸದೆ, ತಿರುಗದೆ, ನಾಲ್ಕು ಮತವನ್ನು ಗಳಿಸುವ ಶಕ್ತಿಯು ಇಲ್ಲದ ಆ ಸಂಘಟನಾ ಕಾರ್ಯದರ್ಶಿಯ ವಿರುದ್ಧ ಮಾತನಾಡಿದ ಒಬ್ಬನೇ ಒಬ್ಬ ವ್ಯಕ್ತಿ ಅಂದರೆ ರೇಣುಕಾಚಾರ್ಯ ಬಿಜೆಪಿಯಲ್ಲಿ ಅವರು ಬದುಕುಳಿಯಲು ಸಾಧ್ಯವೇ ಎಂದು ಕಾದು ನೋಡಬೇಕು ಎಂದು ಹೇಳಿದೆ.
ಬಿ ಎಲ್ ಸಂತೋಷ ಅವರೇ, ರೇಣುಕಾಚಾರ್ಯರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಿ. ನಿಮ್ಮ ದಮ್ಮು ತಾಕತ್ತು ನಿರೂಪಿಸಿ ಎಂದು ಕಾಂಗ್ರೆಸ್ ಸಂತೋಷ್ ಅವರ ಕಾಲೆಳೆದಿದೆ. ಪರೋಕ್ಷವಾಗಿ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ ಹಿನ್ನೆಲೆ ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬಿಜೆಪಿ ಶಿಸ್ತು ಪಾಲನಾ ಸಮಿತಿಯಿಂದ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ಇನ್ನೊಂದೆಡೆ ಪಕ್ಷ ವಿರೋಧಿ ಹೇಳಿಕೆ ನೀಡಿರುವ ಒಟ್ಟು 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.