ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್‌ ಪ್ಲೇಟ್‌-ವಿವಾದಕ್ಕೆ ತೆರೆ-ಅರ್ಹ ಕಂಪೆನಿಗಳಿಗೆ ಅವಕಾಶ

ಮಂಗಳೂರು: ರಾಜ್ಯದಲ್ಲಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (ಹೆಚ್ ಎಸ್‌ ಆರ್‌ ಪಿ)  ಅಳವಡಿಸುವ ಯೋಜನೆ ಜಾರಿಗೆ ವಿಚಾರದಲ್ಲಿ ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆರಂಭಿಸಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿದೆ. ಹಿಂದಿನ ಸರಕಾರದ ಅವಧಿಯಲ್ಲಿ ತಪ್ಪುಗಳು ಆಗಿದ್ದರೆ ಸರಿಪಡಿಸುವುದಾಗಿ ಭರವಸೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಹಾಗೂ ಸಮತಾ ಸೈನಿಕ ದಳ ವಿದ್ಯಾರ್ಥಿ ಒಕ್ಕೂಟ ಅಭಿನಂದಿಸಿದೆ.

ಅಪರಾಧ ಕೃತ್ಯಗಳನ್ನು ತಡೆಯಲು ಹಾಗೂ ಕಾನೂನು ಉಲ್ಲಂಘನೆ ಯಂತಹ ಪ್ರಕರಣಗಳನ್ನು ಭೇದಿಸಲು ಅನುಕೂಲವಾಗುವಂತೆ ಎಚ್ ಎಸ್ ಆರ್ ಪಿ ಅಳವಡಿಕೆ ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು ಇದಕ್ಕಾಗಿ ವಿಶಿಷ್ಟ ನಂಬರ್ ಪ್ಲೇಟ್ ಗಳನ್ನು ತಯಾರಿಸಲು ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೆಲವು ಮಾಫಿಯಾ ಗಳ ಒತ್ತಡಕೊಳ್ಳಗಾಗಿ ಕೇವಲ ನಾಲ್ಕು ಐದು ಕಂಪನಿಗಳ ಉತ್ಪನ್ನಗಳಿಗಷ್ಟೇ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸಾರಿಗೆ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಜನಸ್ನೇಹಿ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆಗ್ರಹಿಸಿದೆ.

ಈ ಹೋರಾಟವನ್ನು ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಬೆಂಬಲಿಸಿದೆ. ಈ ವಿಚಾರದಲ್ಲಿ ಸರಕಾರ ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಸ್ವಾಗತಾರ್ಹ ಎಂದಿದೆ. ಹೆಚ್ ‌ಎಸ್‌ ಆರ್‌ ಪಿ ಕುರಿತ ಕಡತ ಇನ್ನೂ ಸರಕಾರದ ಬಳಿ ಬಂದಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರಕಾರದ ಗೈಡ್ಲೈನ್ಸ್ ಪ್ರಕಾರ ಎಷ್ಟು ಕಂಪನಿಗಳಿವೆಯೋ ಅಷ್ಟಕ್ಕೂ ಅನುಮತಿ ಕೊಡುತ್ತೇವೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲಿಯೇ ಎರಡು ಕೋಟಿಗೂ ಹೆಚ್ಚು ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಈ ವಾಹನಗಳಿಗೆ ಎಚ್ಎಸ್ಆರ್‌ಪಿ  ಪೂರೈಸಲು ಕೆಲವೇ ಕಂಪನಿಗಳಿಗೆ ಮಾತ್ರ ಅವಕಾಶ ನೀಡಿದಲ್ಲಿ ಕೆಲ ಮಧ್ಯವರ್ತಿ ನಿಯಂತ್ರಣ ಮಾಫಿಯ ಹುಟ್ಟಿಕೊಂಡು ಮಾರುಕಟ್ಟೆಯಲ್ಲಿ ಏಕಸ್ವಾಮಿಯದ ಅಧಿಪತ್ಯ ಸ್ಥಾಪಿಸುತ್ತದೆ. ಇದರಿಂದ ಈ ಉದ್ಯಮವನ್ನೇ ನಂಬಿರುವ ಸುಮಾರು 20 ಸಾವಿರ ಕುಟುಂಬಗಳು ಬೀದಿಗೆ ಬೀಳಬಹುದು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಾ. ವಿ ಎಸ್ ವೆಂಕಟಾಚಲ ಹಾಗೂ ಸಮತಾ ಸೈನಿಕ ದಳ ವಿಧ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜಿ ಗೋಪಾಲ್ ಸಾರಿಗೆ ಸಚಿವರ ಗಮನ ಸೆಳೆದಿದ್ದಾರೆ.

LEAVE A REPLY

Please enter your comment!
Please enter your name here