ದೇವಸ್ಥಾನದ ಭೂಮಿಯ ಮಾಲಕತ್ವ- ಗೊಂದಲ ಬಗೆಹರಿಸಿದ ಸುಪ್ರೀಂ ಕೋರ್ಟ್ ತೀರ್ಪು

ಮಂಗಳೂರು (ನವ ದೆಹಲಿ): ದೇವಸ್ಥಾನಕ್ಕೆ ಮೀಸಲಾದ ಭೂಮಿಯ ಒಡೆತನ ಯಾರಿಗೆ ಸೇರಿದ್ದು ಎಂಬ ಗೊಂದಲವನ್ನು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಬಗೆಹರಿಸಿದೆ.
ದೇವಸ್ಥಾನದ ಅರ್ಚಕ ಯಾ ಪೂಜಾರಿಯೂ ದೇವಸ್ಥಾನದ ಸ್ವತ್ತಿನ ಒಡೆಯ ಅಲ್ಲ. ದೇವರೇ ನಿಜವಾದ ಮಾಲೀಕ ಎಂದು ಆದೇಶದಲ್ಲಿ ತಿಳಿಸಲಾಗಿದೆ.


ದೇವಸ್ಥಾನಗಳಿಗೆ ಮೀಸಲಾದ ಭೂ ದಾಖಲೆಗಳಲ್ಲಿ ಅರ್ಚಕರ ಹೆಸರನ್ನು ಸೇರಿಸುವುದಕ್ಕೆ ಉದ್ಭವಿಸಿರುವ ಗೊಂದಲ ಕುರಿತು ಪ್ರಕರಣದ ವಿಚಾರಣೆ ನಡೆಸಿದ ಹೇಮಂತ್ ಗುಪ್ತ ಮತ್ತು ಎ ಎಸ್ ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶವನ್ನು ನೀಡಿದೆ. ಪುರೋಹಿತರು ಅರ್ಚಕರು ಅಥವಾ ಪೂಜೆ ಮಾಡುವ ಪೂಜಾರಿ ದೇವಸ್ಥಾನದ ಆಸ್ತಿಯ ನಿರ್ವಹಣೆಗಾಗಿ ಮಾತ್ರ ಭೂಮಿಯ ಮೇಲಿನ ತಾತ್ಕಾಲಿಕ ಒಡೆತನ ಹೊಂದಬಹುದಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಸೊತ್ತಿನ ವಿಷಯದಲ್ಲಿ ಭೂ ದಾಖಲೆಗಳ ಮಾಲೀಕತ್ವದ ಕಾಲಂನಲ್ಲಿ ದೇವರ ಹೆಸರು ಮಾತ್ರ ಇರಬೇಕು. ದೇವರೇ ನಿರ್ದಿಷ್ಟ ಭೂಮಿಯ ನಿಜವಾದ ಮಾಲೀಕ. ಅಧಿಕೃತ ವಾರಸುದಾರರು ದೇವರೇ ಆಗಿರುತ್ತಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಭೂಮಿ ಬಳಸಿಕೊಂಡು ವೃತ್ತಿ ಕೈಗೊಳ್ಳುವುದಾದರೆ ಅದು ಕೂಡ ದೇವರ ಮಾಲೀಕತ್ವದ ಅಡಿಯಲ್ಲಿಯೇ ಇರಬೇಕು. ಆದರೆ ವೃತ್ತಿ ನಿರ್ವಹಣೆಗೆ ಸೇವಕರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಆಗ ಅಂತಹ ಸೇವಕರ ಹೆಸರನ್ನು ಭೂ ದಾಖಲೆಗಳಲ್ಲಿ ನಮೂದಿಸುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಈ ವಿಚಾರದಲ್ಲಿ ಕಾನೂನು ಸ್ಪಷ್ಟವಾಗಿದೆ. ಪುರೋಹಿತರು ಅರ್ಚಕರು ದೇವಸ್ಥಾನಕ್ಕೆ ಸಂಬಂಧಿಸಿದ ಕೃಷಿ ಭೂಮಿಯ ಗೇಣಿದಾರ ಅಥವಾ ಸರ್ಕಾರಿ ಭೋಗಿದಾರ ಅಥವಾ ಮಾಫಿ ಭೂಮಿಯ ಬಾಡಿಗೆದಾರ ಅಲ್ಲ ಎಂದು ಕಾಯ್ದೆ ಹೇಳುತ್ತದೆ. ಆದರೆ ದೇವಸ್ಥಾನದ ನಿರ್ವಹಣೆಯ ಉದ್ದೇಶಕ್ಕೆ ಆಡಳಿತ ಮಂಡಳಿಯ ಮೂಲಕ ತಾತ್ಕಾಲಿಕ ಉಳುಮೆ ಹೊಡೆತನವನ್ನು ಹೊಂದಬಹುದಾಗಿದೆ. ಖಾಯಂ ಮಾಲಿಕತ್ವ ಮಾತ್ರ ದೇವರದೇ ಆಗಿರುತ್ತದೆ ಎಂದು ತೀರ್ಪು ಸ್ಪಷ್ಟವಾಗಿ ಹೇಳಿದೆ.

ಕಲ್ಲಿನ ವಿಗ್ರಹವಾಗಿರುವ ಭಗವಂತನ ಹೆಸರಿನಲ್ಲಿ ಇರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಹೇಗೆ ನಿರ್ವಹಿಸುವುದು? ದೇವಸ್ಥಾನದ ನಿತ್ಯದ ಚಟುವಟಿಕೆಗಳು ಬೆಳವಣಿಗೆಗಳನ್ನು ನಿಭಾಯಿಸುವವರು, ನೋಡಿಕೊಳ್ಳುವವರು ಯಾರು? ಪರಬಾರೆ ವ್ಯವಹಾರ ಹೇಗೆ ನಡೆಸುವುದು? ಈ ಕುರಿತ ಗೊಂದಲ ವಿವಾದಗಳಿಗೆ ಸುಪ್ರೀಂ ಕೋರ್ಟ್ ನ ಈ ತೀರ್ಪು ಉತ್ತರ ನೀಡಿದೆ.

LEAVE A REPLY

Please enter your comment!
Please enter your name here