ಮಂಗಳೂರು : ತುಳುನಾಡಿನ ದೈವಾರಾಧನೆಯನ್ನು ನಿಂದಿಸಿ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸೆನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಅಮೃತಹಳ್ಳಿ ನಿವಾಸಿ ಕೆಂಪಯ್ಯ ಎಂಬವರ ಪುತ್ರ ಶಿವರಾಜ್ ಎಚ್ ಕೆ (37) ಎಂದು ಗುರುತಿಸಲಾಗಿದೆ. ಟ್ವಿಟರ್ ನಲ್ಲಿ ನಕಲಿ ಖಾತೆ ತೆರೆದು ತುಳುನಾಡಿನ ದೈವಾರಾಧನೆ ಬಗ್ಗೆ ನಿಂದಿಸಿ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಬಗ್ಗೆ ತುಳುನಾಡಿನ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ದೂರು ನೀಡಿತ್ತು. ಸಂಘಟನೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಂತೆ ಸಿಸಿಬಿ ಘಟಕದ ಎಸಿಪಿ, ಪಿಎ ಹೆಗಡೆ ಅವರ ನೇತೃತ್ವದ ಮಂಗಳೂರು ನಗರ ಸನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಎಂ ಪಿ ಹಾಗೂ ಸಿಬ್ಬಂದಿಯವರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.