ತಾಜ್ ಹೋಟೆಲ್ ಹಿಂದಿನ ಸತ್ಯ ಕಥೆ

ಮಂಗಳೂರು (ಮುಂಬೈ ):ತಾಜ್ ಹೋಟೆಲ್ ದೇಶದ ಅತ್ಯಂತ ಪ್ರತಿಷ್ಠಿತ ಹೋಟೆಲ್ ಸಮೂಹ. ದೇಶ ವಿದೇಶಗಳಲ್ಲಿ ನೂರಕ್ಕೂ ಹೆಚ್ಚು ಹೋಟೆಲ್ ಹೊಂದಿರುವ ಈ ಸಂಸ್ಥೆ ಟಾಟಾ ಒಡೆತನದ್ದು. ಮೊದಲ ತಾಜ್ ಹೋಟೆಲ್ ಆರಂಭವಾಗಿದ್ದು ಮುಂಬೈಯ ಕೊಲಾಬಾದಲ್ಲಿ ಸುಮಾರು 120 ವರ್ಷಗಳ ಹಿಂದೆ. ಈ ಹೋಟೆಲ್ ಆರಂಭವಾದ ಹಿಂದೆ ಒಂದು ಸ್ವಾರಸ್ಯಕರವಾದ ಕಥೆ ಇದೆ.

1890 ರ ದಶಕದಲ್ಲಿ ಮುಂಬೈಯಲ್ಲಿ ವ್ಯಾಟ್ಸನ್ ಎಂಬ ಹೆಸರಿನ ಒಂದು ಪ್ರತಿಷ್ಠಿತ ಹೋಟೆಲನ್ನು ಬ್ರಿಟಿಷರು ನಡೆಸುತ್ತಿದ್ದರು. ಮುಂಬೈಯಲ್ಲಿದ್ದ ಹೆಚ್ಚಿನ ಯುರೋಪಿಯನ್ನರು ತಮ್ಮ ಸಾಯಂಕಾಲದ ಮೋಜಿಗಾಗಿ ಇದೇ ಹೋಟೆಲನ್ನು ಅವಲಂಬಿಸಿದ್ದರು. ಆದರೆ ಅಲ್ಲಿ ಭಾರತೀಯರಿಗೆ ಪ್ರವೇಶ ನೀಡುತ್ತಿರಲಿಲ್ಲ.
ಒಮ್ಮೆ ಇಲ್ಲಿ ಒಂದು ಹಾಲಿವುಡ್ ಚಿತ್ರದ ಸ್ಕ್ರೀನಿಂಗ್ ಕಾರ್ಯಕ್ರಮವಿತ್ತು. ಚಿತ್ರದ ನಿರ್ಮಾಪಕರು ಜೆಮ್ ಶೇಟ್ ಜೀ ಟಾಟಾ ರವರ ಗೆಳೆಯರಾಗಿದ್ದರಿಂದ ಅವರನ್ನು ಕೂಡ ಆಮಂತ್ರಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದಾಗ ಹೋಟೆಲ್ ಆಡಳಿತ ಭಾರತೀಯನೆಂಬ ಕಾರಣಕ್ಕೆ ಅವರನ್ನು ಒಳಗೆ ಹೋಗಲು ಬಿಡಲಿಲ್ಲ. ಅವಮಾನಿತರಾಗಿ ಹಿಂದಿರುಗಿ ಬಂದ ಟಾಟಾ ಅಂದೇ ಒಂದು ತೀರ್ಮಾನವನ್ನು ತೆಗೆದುಕೊಂಡಿದ್ದರು. ದೇಶದಲ್ಲೇ ಅತ್ಯುತ್ತಮವಾದ ಒಂದು ಐಷಾರಾಮಿ ಹೋಟೆಲನ್ನು ತೆರೆಯಬೇಕೆಂದು. ಕೆಲವೇ ದಿನಗಳಲ್ಲಿ ಅದಕ್ಕೆ ಬೇಕಾದ ರೂಪುರೇಷೆ ಸಿದ್ಧವಾಯಿತು. ಐದೇ ವರ್ಷಗಳ ಅವಧಿಯಲ್ಲಿ ಕೆಲಸಪೂರ್ತಿ ಗೊಳಿಸಿ 16 ಡಿಸೆಂಬರ್1903ರಲ್ಲಿ ಸೌತ್ ಮುಂಬೈಯ ಕೋಲಾಬಾದಲ್ಲಿ 44 ಸೂಟ್ ರೂಮ್ ಗಳ ಸಹಿತ ಒಟ್ಟು 600 ಕೋಣೆಗಳಿರುವ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಗ್ರಾಹಕರಿಗಾಗಿ ತೆರೆದುಕೊಂಡಿತು. ಮೊದಲಿಗೆಲ್ಲ ಅಲ್ಲಿದ್ದ ಹೆಚ್ಚಿನ ಸಿಬ್ಬಂದಿಗಳು ಯುರೋಪಿಯನ್ನರು. ಟಾಟಾ ರವರು ತನಗಾದ ಅವಮಾನಕ್ಕೆ ಪ್ರತಿಕಾರ ತೀರಿಸಲು ಈ ರೀತಿ ಮಾಡಿದರೋ ಎಂದು ಗೊತ್ತಿಲ್ಲ. ಈಗ ರಾತ್ರಿ ಒಂದಕ್ಕೆ ರೂಮುಗಳಿಗೆ 10000 ದಿಂದ 75000 ದವರೆಗೆ ಚಾರ್ಜ್ ಮಾಡುವ ತಾಜ್ ಆರಂಭದಲ್ಲಿ 13 ರಿಂದ 20 ರೂಪಾಯಿಗಳನ್ನು ವಿಧಿಸುತ್ತಿತ್ತು. ಮೊದಲನೆಯ ಮಹಾಯುದ್ಧದಲ್ಲಿ ಸರಕಾರದ ವಿನಂತಿ ಮೇರೆಗೆ ತಾಜ್ ಹೋಟೆಲನ್ನು
ಒಂದು ಆಸ್ಪತ್ರೆ ಯನ್ನಾಗಿ ಮಾಡಲಾಗಿತ್ತು ಮತ್ತು ಗಾಯಾಳು ಸೈನಿಕರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಜ್ ಎಂಬುದು ದೇಶದ ಒಂದು ಪ್ರತಿಷ್ಠೆಯ ಬ್ರಾಂಡ್. ಮಾತ್ರವಲ್ಲದೆ ತನ್ನ ಹೋಟೆಲ್ ಕಟ್ಟಡಗಳಿಗೆ ತಾಜ್ ಗ್ರೂಪ್ ಪೇಟೆಂಟ್ ಪಡೆದುಕೊಂಡಿದೆ.

ಇಲ್ಲಿಯವರೆಗೆ ತಾಜ್ ನಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ನಿಂದ ಹಿಡಿದು ಬರಾಕ್ ಒಬಾಮಾ ವರೆಗೆ ವಿಶ್ವದ ಹಲವಾರು ಗಣ್ಯಾತಿ ಗಣ್ಯರು ಬಂದು ಇಲ್ಲಿ ಉಳಿದುಕೊಂಡಿದ್ದಾರೆ. 1973 ರಲ್ಲಿ ತಾಜ್ ತನ್ನ ಎದುರಿಗಿದ್ದ ಬೇರೊಂದು ಹೋಟೆಲನ್ನು ಖರೀದಿಸಿ ತಾಜ್ ಟವರ್ ಎಂದು ನಾಮಕರಣ ಮಾಡಿದೆ. ಒಂದರ್ಥದಲ್ಲಿ ತಾಜ್ ನಿಜವಾಗಿಯೂ ತನ್ನ ಹೆಸರಿಗೆ ತಕ್ಕ ಹಾಗೆ ದೇಶದ ಕಿರೀಟವಾಗಿ, ವಿಶ್ವ ಹೋಟೆಲ್ ಮಾರುಕಟ್ಟೆಯಲ್ಲಿ ಕಳೆದ 120 ವರ್ಷಗಳಿಂದ ರಾರಾಜಿಸುತ್ತಿದೆ.

 

LEAVE A REPLY

Please enter your comment!
Please enter your name here