2023: ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ – ಹಲವರಿಗೆ ಗೊಂದಲ

ಮಂಗಳೂರು: ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ ಬರಲಿದೆ. ಒಂದು ಜುಲೈ 17 ಮತ್ತೊಂದು ಆಗಸ್ಟ್ 16 ರಂದು. ಮೊದಲನೆಯದ್ದು ಆಷಾಢ ಮಾಸದ ಅಮಾವಾಸ್ಯೆ. ಎರಡನೆಯದ್ದು ಅಧಿಕ ಶ್ರಾವಣ ಮಾಸದ ಅಮಾವಾಸ್ಯೆ. ಈ ಹಿನ್ನೆಲೆಯಲ್ಲಿ ಯಾವ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆ ಎಂದು ಆಚರಿಸಬೇಕೆಂಬ ಗೊಂದಲ ಹಲವರಲ್ಲಿ ಮೂಡಿದೆ. ಪ್ರಾದೇಶಿಕವಾಗಿ ವಸ್ತುತಸ್ತು ಆಟಿ ಅಮಾವಾಸ್ಯೆ ಎನ್ನುವ ದಿನವನ್ನು ಶ್ರದ್ಧೆಯಿಂದ ಆಚರಿಸುವ ಪರಿಪಾಠ, ಕ್ರಮ  ನಮ್ಮಲ್ಲಿದೆ. ಇಂತಹ ಸಂದರ್ಭದಲ್ಲಿ ಕೆಲವು ಹಬ್ಬಗಳನ್ನು ಎರಡೂ ದಿನಗಳಲ್ಲಿ ಆಚರಿಸುವ ಕ್ರಮವೂ ಇದೆ.

ಆದರೆ ಆಟಿ ಅಮಾವಾಸ್ಯೆಯ ದಿನ ಪಾಲೆಮರದ ಹಾಲು ಕುಡಿಯುವ ಸಂಪ್ರದಾಯವಿದೆ. ಇದು ಆಟಿ ಅಮಾವಾಸ್ಯೆಯ ಪ್ರಧಾನ ಆಚರಣೆಯೂ ಹೌದು. ಇದು ದೇಹದಲ್ಲಿರುವ ಕ್ರಿಮಿಗಳನ್ನು ಕೊಲ್ಲುವ ಮೂಲಕ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಆರೋಗ್ಯದ ಉದ್ದೇಶಕ್ಕಾಗಿ ಉಪಯೋಗವಾಗುವ ಪಾಲೆಮರದ ಹಾಲನ್ನು ವರ್ಷಕ್ಕೊಂದೇ ದಿನ ಕುಡಿಯುವುದು ಸಂಪ್ರದಾಯ. ಮೇಲಾಗಿ ಅದು ಪಾಲೆಯ ಮರದ ಕೆತ್ತೆಯಿಂದ ತೆಗೆಯುವ ಹಾಲಾಗಿದ್ದು, ಮರದ ಸಂಖ್ಯೆಯೂ‌ ಕಡಿಮೆ ಇರುವ ಕಾರಣ ಎರಡೆರಡು ಭಾರಿ ಅದರ ಕೆತ್ತೆ ತೆಗೆದರೆ ಮರಕ್ಕೂ ತೊಂದರೆಯಾಗಬಹುದು. ಪಾಲೆಮರದ ಹಾಲು ತುಂಬಾ ಉಷ್ಣಕಾರಕವಾದ ಕಾರಣದಿಂದ ಎರಡೆರಡು ದಿನ ಕುಡಿಯುವುದು ಸಮಂಜಸವಲ್ಲ. ಈ ಎಲ್ಲಾ ದೃಷ್ಟಿಯಿಂದ ಇದರ ಆಚರಣೆಯ  ಒಂದೇ ದಿನವಾದರೆ ಸೂಕ್ತ.

ಅಧಿಕಮಾಸವನ್ನು ಮಲಮಾಸ ಎಂಬುವುದಾಗಿಯೂ ಹೇಳಲಾಗುತ್ತದೆ. ಆದ್ದರಿಂದ ಅಧಿಕ ಶ್ರಾವಣದ ಎರಡನೆಯ ಅಮಾವಾಸ್ಯೆ ಮೊದಲ ಅಮಾವಾಸ್ಯೆಯಷ್ಟು ಸೂಕ್ತವಲ್ಲದ ದಿನ ಅಲ್ಲ. ಈ ಎಲ್ಲಾ ಕಾರಣದಿಂದ ವಿದ್ವಾಂಸರು ಅಭಿಪ್ರಾಯ ಪಟ್ಟಂತೆ ಮೊದಲ ಆಟಿ ಅಮಾವಾಸ್ಯೆಯನ್ನು ಜುಲೈ 17 ರಂದೇ ಆಚರಿಸುವುದು ಸೂಕ್ತ. ಪಲಿಮಾರು ಮಠದ ಪಂಚಾಂಗದಲ್ಲಿಯೂ ಈ ದಿನವನ್ನೇ ಆಟಿ ಅಮಾವಾಸ್ಯೆ ಎಂದು ಸೂಚಿಸಲಾಗಿದೆ.

 

LEAVE A REPLY

Please enter your comment!
Please enter your name here