ಮಂಗಳೂರು (ಶ್ರೀಹರಿಕೋಟಾ): ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳು ಭಾರತದ ಬಹು ನಿರೀಕ್ಷಿತ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಗೊಂಡಿದೆ. ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2:35 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿದೆ.
2019ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ-2 ರ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗದೆ ಅಪ್ಪಳಿಸಿ ವೈಫಲ್ಯ ಕಂಡಿತ್ತು. ಇದರ ಮುಂದುವರಿದ ಭಾಗವಾಗಿರುವ ಚಂದ್ರಯಾನ-3 ಉಪಗ್ರಹ ಎಲ್ವಿಎಂ3-ಎಂ4 ರಾಕೆಟ್ ಅನ್ನು ಹೊತ್ತು ಸಾಗಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲನ್ನು ಹೊಂದಿದ್ದು ಇದು ಸುಮಾರು 3900 ಕಿಲೋ ಗ್ರಾಂ ಗಳಷ್ಟು ಭಾರವನ್ನು ಹೊಂದಿದೆ.
ಈ ಉಪಗ್ರಹ ಇಳಿಯಲು ಗೊತ್ತು ಪಡಿಸಿದ ಲ್ಯಾಂಡಿಂಗ್ ಕೇಂದ್ರ ಚಂದ್ರನ ದಕ್ಷಿಣ ಧ್ರುವವಾಗಿದೆ. ಚಂದ್ರನ ಮೇಲ್ಮೈ ಮೇಲೆ ಆಗಸ್ಟ್ 23 ಅಥವಾ 24ರ ಸುಮಾರಿಗೆ ಲ್ಯಾಂಡಿಂಗ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದ ಮೊದಲ ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಭಾಗದಲ್ಲಿ ಸೂರ್ಯನ ಬೆಳಕು ಪ್ರವೇಶ ಮಾಡುವುದಿಲ್ಲ. ಇಲ್ಲಿ ಮೈನಸ್ 230° ಸೆಲ್ಸಿಯಸ್ ತಾಪಮಾನವಿದ್ದು ಎಲೆಕ್ಟ್ರಾನಿಕ್ ಉಪಕರಣಗಳು ಕಾರ್ಯವೆಸಗುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ