ಅ.16ರಿಂದ ಗೃಹಲಕ್ಷ್ಮೀ ಯೋಜನೆಯಡಿ ಹಣ ವಿತರಣೆ

ಮಂಗಳೂರು /ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್‌ 16ರಿಂದ ಪ್ರತಿ ಕುಟುಂಬದ ಯಜಮಾನಿಯ ಖಾತೆಗೆ ತಿಂಗಳಿಗೆ ₹ 2,000 ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು,ಅ.16ರಿಂದ ನೆರೆವು ವಿತರಣೆ ಮಾಡಲಾಗುವುದು ಎಂದು ಹೇಳಿದರು.

‘ಚುನಾವಣೆಗೂ ಮುನ್ನ ನಾವು ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ. ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಅಂತಹ ಮಾತುಗಳಿಗೆ ಯಾವ ಬೆಲೆಯೂ ಇಲ್ಲ’ ಎಂದರು.ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಕೋಟ್ಯಂತರ ಕುಟುಂಬಗಳಲ್ಲಿ ಬೆಳಕು ತರಲಿದೆ. ಮಹಿಳೆಯರ ಕೈಗೆ ಸಿಗುವ ಹಣ ಆರ್ಥಿಕತೆಯಲ್ಲಿ ಚಲನಶೀಲತೆಗೆ ನೆರವಾಗಲಿದೆ’ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯನ್ನು ಮೈಸೂರಿನಲ್ಲಿ, ಗೃಹಜ್ಯೋತಿ ಯೋಜನೆಯನ್ನು ಕಲಬುರಗಿಯಲ್ಲಿ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಮಾತನಾಡಿ, ‘ಇದು ಸ್ತ್ರೀಯರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾರ್ಯಕ್ರಮ. ಈ ಯೋಜನೆಯು ರಾಜ್ಯದ ಕೋಟ್ಯಂತರ ಕುಟುಂಬಗಳಲ್ಲಿ ನೆಮ್ಮದಿ ತರಲಿದೆ’ ಎಂದು ಹೇಳಿದರು.

ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್ , ರಹೀಂ ಖಾನ್, ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್‌. ಮಂಜುಳಾ, ನಿರ್ದೇಶಕಿ ಅರ್ಚನಾ ಎಂ.ಎಸ್. ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here