



ಮಂಗಳೂರು(ಬೆಂಗಳೂರು): ಜೆಡಿಎಸ್ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರವರು ತಿಳಿಸಿದ್ದಾರೆ.







ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ ಅಥವಾ ವಿಲೀನಗೊಳ್ಳುತ್ತದೆ ಎಂಬ ಊಹಾಪೋಹಗಳಿಗೆ ಇಂದು ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಅವರು, ನಾವು INDIA ಅಥವಾ NDA ಮೈತ್ರಿಕೂಟದ ಜೊತೆ ಸೇರುವುದಿಲ್ಲ ಎಂದಿದ್ದಾರೆ. ಬಿಜೆಪಿಯವರೊಂದಿಗೆ ಸೇರಿ ಪ್ರತಿಭಟನೆ ಮಾಡಿದ ಮಾತ್ರಕ್ಕೆ ಕಥೆ ಹೆಣೆಯುವುದು ಬೇಡ. ಯಾವುದೇ ಪಕ್ಷದ ಕೂಟವನ್ನು ಸೇರದೆ ಜೆಡಿಎಸ್ ಜನರ ಬಳಿ ತೆರಳಲಿದೆ. ಪಕ್ಷಕ್ಕಾಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.




ಇನ್ನೊಂದೆಡೆ, ‘ರಾಜ್ಯ ಕಾಂಗ್ರೆಸ್ ಸರಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಜೆಡಿಎಸ್, ಬಿಜೆಪಿ ಒಟ್ಟಾಗಿ ಹೋರಾಟ ನಡೆಸಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ”ಬಿಜೆಪಿಯೂ ವಿರೋಧ ಪಕ್ಷ, ಜೆಡಿಎಸ್ ಸಹ ವಿರೋಧ ಪಕ್ಷ. ಒಟ್ಟಾಗಿ ಕೆಲಸ ಮಾಡುವ ನಿರ್ಧಾರ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ಸಂಘಟನೆಗೆ 10 ಜನರ ತಂಡ ರಚನೆ ಮಾಡಲಾಗಿದೆ” ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
”ಇಡೀ ರಾಜ್ಯದಲ್ಲಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವಂತೆ ದೇವಗೌಡರು ನಮಗೆ ಸಲಹೆ ನೀಡಿದ್ದಾರೆ. ಅವರ ಮಾರ್ಗದರ್ಶನ, ಪಕ್ಷ ಸಂಘಟನೆ ಮೂಲಕ ಯುವಕರ ತಂಡ ರಚನೆ ಮಾಡಲಾಗುತ್ತದೆ” ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಜರಿದ್ದರು.











