ತನಿಖೆಗೆ ತೆರಳಿದ್ದ ಕರ್ನಾಟಕ ಪೊಲೀಸ್‌ ಅಧಿಕಾರಿಗಳಿಂದ ಲಂಚ ಸ್ವೀಕಾರ – ಕೇರಳ ಪೊಲೀಸರಿಂದ ಬಂಧನ

ಮಂಗಳೂರು: ಪ್ರಕರಣವೊಂದರ ತನಿಖೆಗೆಂದು ಕೇರಳಕ್ಕೆ ಹೋಗಿದ್ದ ಕರ್ನಾಟಕ ಪೊಲೀಸರ ತಂಡವನ್ನು ಲಂಚ ಪಡೆದ ಆರೋಪದ ಮೇಲೆ ಕೇರಳ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಮೂವರು ಕಾನ್‌ಸ್ಟೆಬಲ್ ಸಹಿತ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದು, ಬಂಧನಕ್ಕೊಳಗಾದ ಕರ್ನಾಟಕ ಪೊಲೀಸರು ಬೆಂಗಳೂರಿನ ವೈಟ್‌ಫೀಲ್ಡ್‌ನ ಸೆನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಎಂದು ತಿಳಿದುಬಂದಿದೆ. ಬಂಧಿತ ಕರ್ನಾಟಕ ಪೊಲೀಸರ ವಾಹನದಲ್ಲಿದ್ದ ಸುಮಾರು ನಾಲ್ಕು ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರಿಪ್ಟೋ ಕರೆನ್ಸಿಯ ಬಗ್ಗೆ ತನಿಖೆಗಾಗಿ ಕರ್ನಾಟಕ ಪೊಲೀಸರ ತಂಡ ಕೇರಳಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ.  ವೈಟ್‌ ಫೀಲ್ಡ್‌ ಸಿಇಎನ್ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌, ಸಿಬ್ಬಂದಿಗಳಾದ ವಿಜಯ್‌ ಕುಮಾರ್‌ ಹೆಚ್ ಸಿ, ಶಿವನಿ ಹೆಚ್‌ ಸಿ ಮತ್ತು ಸಂದೇಶ್ ಬಂಧಿತ ಪೊಲೀಸ್ ಅಧಿಕಾರಿಗಳು ಎಂದು ತಿಳಿದು ಬಂದಿದೆ.

ವೈಟ್‌ ಫೀಲ್ಡ್‌ ಪೊಲೀಸರು ಕೊಚ್ಚಿಯ ಕುಂಬಲಂಗಿಯಿಂದ ಇಬ್ಬರನ್ನು ವಶಕ್ಕೆ ಪಡೆದಿದ್ದು, ಬಿಡುಗಡೆ ಮಾಡಲು 10 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. 4 ಲಕ್ಷ ಪಾವತಿಸಿದರೂ ಪೊಲೀಸ್‌ ಅಧಿಕಾರಿಗಳು ಇಬ್ಬರನ್ನೂ ಬಿಡುಗಡೆ ಮಾಡಿರಲಿಲ್ಲ ಎಂದು ಮಹಿಳೆಯೋರ್ವರು ಕೊಚ್ಚಿನ್ ಪೊಲೀಸರಿಗೆ‌ ದೂರು ನೀಡಿದ್ದರು. ಮಹಿಳೆಯ ದೂರಿನ ಆಧಾರದಲ್ಲಿ ಕರ್ನಾಟಕ ಪೊಲೀಸರು ಎಂದು ಹೇಳಿಕೊಂಡ ತಂಡ ಸಂಚರಿಸುತ್ತಿದ್ದ ವಾಹನವನ್ನು ತಡೆದಾಗ 3,95,000 ಹಣ ದೊರಕಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಿರಲಿಲ್ಲ. ಹಾಗಾಗಿ ಅವರನ್ನು ವಶಕ್ಕೆ ಪಡೆದು, ಬೆದರಿಸಿ ಹಣ ಸುಲಿಗೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ವೈಟ್‌ಫೀಲ್ಡ್‌ನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆಂದು ಬಂದಾಗ ಈ ರೀತಿ ಬೇಡಿಕೆ ಇಟ್ಟಿದ್ದರು. ಮೂವರು ಕಾನ್‌ಸ್ಟೆಬಲ್ ಸಹಿತ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಕೊಚ್ಚಿನ್ ಡಿಸಿಪಿ ಎಸ್ ಶಶಿಧರನ್ ಮಾಹಿತಿ ನೀಡಿದ್ದಾರೆ.

‘ಕರ್ನಾಟಕ ಪೊಲೀಸರೊಂದಿಗೆ ಈ ಬಗ್ಗೆ ಸಂಪರ್ಕ ಸಾಧಿಸುತ್ತಿದ್ದೇವೆ. ಅವರು ಬಂದ ಬಳಿಕ ಈ ಪ್ರಕರಣದ ತನಿಖೆಯ ಬಗ್ಗೆ ಮುಂದುವರಿಸಲಿದ್ದೇವೆ. ಕರ್ತವ್ಯದಲ್ಲಿದ್ದಾಗಲೇ ಈ ರೀತಿ ನಡೆದಿರುವುದರಿಂದ ಕೆಲವೊಂದು ಕಾನೂನು ತೊಡಕುಗಳಿವೆ. ಆ ಬಗ್ಗೆಯೂ ಚರ್ಚೆ ನಡೆಸಲಿದ್ದೇವೆ’ ಎಂದು ಡಿಸಿಪಿ ತಿಳಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅಪ್ಡೇಟ್:
ಸಿಆರ್‌ಪಿಸಿ 41ರ ಅಡಿಯಲ್ಲಿ ನೋಟಿಸ್‌ ನೀಡಿದ ನಂತರ ಬಂಧಿತ ಪೊಲೀಸರನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಆ.16 ರಂದು ಕಳಮಶ್ಚೇರಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಆರೋಪಿಗಳು ಲಂಚವಾಗಿ ವಸೂಲಿ ಮಾಡಿದ್ದ 3,95,000 ರೂಪಾಯಿ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

 

LEAVE A REPLY

Please enter your comment!
Please enter your name here