ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಹಾಕಿಕೊಂಡಿರುವ ಕಾಂಗ್ರೆಸ್ ಮುಂದೆ ಬರಲಿರುವ ಎಲ್ಲ ಚುನಾವಣೆಗಾಗಿ ಹೊಸ ತಂಡ ಕಟ್ಟುವ ಉದ್ದೇಶದಿಂದ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿದೆ. ಎರಡೆರಡು ಜವಾಬ್ದಾರಿ ಬೇಡ, ಪಕ್ಷದ ಕೆಲಸಗಳಿಗೆ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹೊಸ ತಂಡ ಕಟ್ಟಬೇಕೆಂಬ ಹೈಕಮಾಂಡ್ ತೀರ್ಮಾನದ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷರ ಸಹಿತ ಪದಾಧಿಕಾರಿಗಳಾಗಿರುವ ಶಾಸಕರು, ಸಚಿವರು ಸದ್ಯದಲ್ಲೇ ಪಕ್ಷದ ಹುದ್ದೆಗಳಿಂದ ಬಿಡುಗಡೆಯಾಗಲಿದ್ದಾರೆ. ಹಾಲಿ ಇರುವ ಪದಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಸಹಿತ ಹೈಕಮಾಂಡ್ ಅಷ್ಟೊಂದು ಉತ್ತಮ ಅಭಿಪ್ರಾಯ ಹೊಂದಿಲ್ಲದ ಕಾರಣ ಕೆಪಿಸಿಸಿ ಪದಾಧಿಕಾರಿಗಳ ಮಟ್ಟದಲ್ಲಿ ಮಹತ್ತರ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ.
ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ರಾಜ್ಯದ ನಾಯಕರು ಹಾಗೂ ಸಚಿವರ ಸಭೆಯಲ್ಲಿ ಲೋಕಸಭಾ ಚುನಾವಣೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು, 20 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಗುರಿ ನೀಡಲಾಗಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮನ್ವಯ-ಹೊಂದಾಣಿಕೆಯಿಂದ ಕೆಲಸ ಮಾಡುವ ಜಿಲ್ಲಾಧ್ಯಕ್ಷರು ಹಾಗೂ ಕೆಪಿಸಿಸಿ ಪದಾಧಿಕಾರಿಗಳನ್ನು ನೇಮಿಸಲು ಮುಹೂರ್ತ ಸಿದ್ಧವಾಗುತ್ತಿದೆ.
ಅದೇ ರೀತಿ ಬಹುತೇಕ ಶಾಸಕರು ಹಾಗೂ ಸಚಿವರಾಗಿದ್ದವರನ್ನು ಪಕ್ಷದ ಹುದ್ದೆಗಳಿಂದ ಬಿಡುಗಡೆಗೊಳಿಸಿ ಹೊಸಬರ ನೇಮಕಕ್ಕೆ ಪಟ್ಟಿ ಸಿದ್ಧವಾಗುತ್ತಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಸರಿ-ಸುಮಾರು 20 ಜಿಲ್ಲೆಯ ಜಿಲ್ಲಾಧ್ಯಕ್ಷರ ಬದಲಾವಣೆ ಆಗುವ ಸಾಧ್ಯತೆಗಳಿವೆ. ಚುನಾವಣೆ ವೇಳೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಆರೋಪ ಸೇರಿದಂತೆ ಸದಸ್ಯತ್ವ ನೋಂದಣಿ, ಪಕ್ಷ ಸಂಘಟನೆ, ಕಾರ್ಯಕರ್ತರ ಜತೆ ಹೊಂದಾಣಿಕೆ ನಿರೀಕ್ಷಿತ ಮಟ್ಟಕ್ಕೆ ಇಲ್ಲ ಎಂದು ಹೇಳಲಾಗುತ್ತಿದ್ದು, ಅಂತಹ ಜಿಲ್ಲಾಧ್ಯಕ್ಷರಿಗೆ ಕೊಕ್ ನೀಡಲಿದ್ದಾರೆ. ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆ, ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿಗೂ ಮುನ್ನ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ಪಡೆದು ಪಕ್ಷ ಸಂಘಟನೆಗೆ ಹೊಸ ತಂಡವನ್ನು ನಿಯೋಜಿಸಬೇಕೆಂಬುದು ಪಕ್ಷದ ಲೆಕ್ಕಾಚಾರವಾಗಿದೆ.
ಒಳ್ಳೆಯ ನಿರ್ಧಾರ ಅದರ ಹೊಟ್ಟಿಗೆ ಕೆಲಸ ಮಾಡಲು ಯೋಗ್ಯರಲ್ಲದ ಮಂತ್ರಿಗಳನ್ನು ಬದಲಾವಣೆ ಮಾಡಿ