ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ – ಆ.26ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ – 1ಕಿ.ಮೀ ರೋಡ್ ಶೋ

ಮಂಗಳೂರು (ಬೆಂಗಳೂರು): ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ‘ಇಸ್ರೋ’ದ ಅಧ್ಯಕ್ಷ ಸೋಮನಾಥ್ ಸೇರಿದಂತೆ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆ.26ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಗುರುವಾರ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ರೋಡ್ ಶೋ ಆಯೋಜನೆ ಮಾಡಲಾಗುತ್ತದೆ. ಚಂದ್ರಯಾನ-3ಕ್ಕೆ ಸರಿಸಾಟಿಯಾದ ಸಾಧನೆಯನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಈ ಸಾಧನೆ ಬಗ್ಗೆ ನಮಗೆಲ್ಲ ಬಹಳ ಹೆಮ್ಮೆ ಇದೆ ಎಂದು ಅವರು ಹೇಳಿದರು.

ಆ.26ಕ್ಕೆ ನಗರದ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರ ಸ್ವಾಗತಕ್ಕೆ 5 ಸಾವಿರ ಜನ ಸೇರಲಿದ್ದಾರೆ. ಇಸ್ರೋ ಸಂಸ್ಥೆ ಇರುವ ಪ್ರದೇಶದಲ್ಲಿ ಮೋದಿಯವರು ಬಂದಾಗ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ ಎಂದು ಅಶೋಕ್ ಹೇಳಿದರು. ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿ.ಮೀ ವರೆಗೆ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದ್ದೇವೆ ಎಂದು ಅಶೋಕ್ ಮಾಹಿತಿ ನೀಡಿದರು. ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನದ ಹಿನ್ನೆಲೆಯಲ್ಲಿ ಆ.26ರ ಬೆಳಗಿನಜಾವ 4:30ರಿಂದ ಬೆಳಗ್ಗೆ 9:30ರ ವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಮೇಖ್ರಿ ಸರ್ಕಲ್, ಯಶವಂತಪುರ ಪ್ಲೈ ಓವರ್, ತುಮಕೂರು ರಸ್ತೆ ಸೇರಿದಂತೆ ಆ ಭಾಗದ ವಿವಿಧ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.‌ ಇನ್ನು ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here