ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿ – ಕೊಲೆಯಲ್ಲಿ ಅಂತ್ಯವಾದ ಪ್ರೀತಿ – ಕುಕ್ಕರ್ ನಿಂದ ಹೊಡೆದು ಪ್ರಿಯತಮೆಯನ್ನು ಕೊಂದ ಪ್ರೇಮಿ

ಮಂಗಳೂರು(ಬೆಂಗಳೂರು): ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿ ಪ್ರೀತಿ ಮರೆತು ಜಗಳವಾಡಿ, ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯನ್ನು ಕೇರಳದ ಕೊಚ್ಚಿ ನಿವಾಸಿ 24 ವರ್ಷದ ದೇವಾ ಎಂದು ಗುರುತಿಸಲಾಗಿದೆ. ಪ್ರಿಯತಮ ವೈಷ್ಣವ್ ಪೊಲೀಸರ ಅತಿಥಿಯಾಗಿದ್ದಾನೆ.

ದೇವಾ ಮತ್ತು ವೈಷ್ಣವ್ ಇಬ್ಬರೂ ಕೇರಳ ಮೂಲದವರು. ವೈಷ್ಣವ್ ತಿರುವಂತನಪುರಂ ನಿವಾಸಿ. ಎಂಜಿನಿಯರಿಂಗ್ ಓದುವ ಸಮಯದಲ್ಲಿ ದೇವಾ ಮತ್ತು ವೈಷ್ಣವ್‌ ನಡುವೆ ಪ್ರೇಮಾಂಕುರವಾಗಿದ್ದು ಇವರ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ್ದರು.  ಪದವಿ ಪಡೆದ ನಂತರ ಬೆಂಗಳೂರಿನ ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಇಬ್ಬರೂ ಕೆಲಸಕ್ಕೆ ಸೇರಿಕೊಂಡಿದ್ದರು. ಮಾತ್ರವಲ್ಲ ಇಬ್ಬರೂ ಲಿವಿಂಗ್ ಟುಗೆದರ್ ನಲ್ಲಿದ್ದರು. ಅದೇನು ಕಾರಣವೋ ಕೆಲವು ಸಮಯದಿಂದ ವೈಷ್ಣವ್‌ ದೇವಾ ಮೇಲೆ ಸಂಶಯ ಪಟ್ಟು ಜಗಳವಾಡುತ್ತಿದ್ದ.

ದೇವಾ ಕೊಲೆಯಾದ ದಿನವೂ ಇವರಿಬ್ಬರ ನಡುವೆ ಅದ್ಯಾವುದೋ ಕಾರಣಕ್ಕೆ ಜಗಳವಾಗಿದೆ. ಕೋಪ ನೆತ್ತಿಗೇರಿಸಿಕೊಂಡ ವೈಷ್ಣವ್‌ ಅಡುಗೆ ಕೋಣೆಯಲ್ಲಿದ್ದ ಕುಕ್ಕರ್‌ ನಿಂದ ದೇವಾ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರಗಾಯಗೊಂಡಿದ್ದ ದೇವಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೊಲೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ವೈಷ್ಣವ್ ನನ್ನ ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ.

LEAVE A REPLY

Please enter your comment!
Please enter your name here