ಮಂಗಳೂರು(ನವದೆಹಲಿ): ‘ಫಿಶಿಂಗ್’ಗಾಗಿ ಸುಪ್ರೀಂಕೋರ್ಟ್ ಹೆಸರಿನಲ್ಲಿ ಸುಳ್ಳು ವೆಬ್ಸೈಟ್ ಸೃಷ್ಟಿಸಿ, ವಂಚಿಸುತ್ತಿರುವ ಬಗ್ಗೆ ಎಚ್ಚರ ವಹಿಸುವಂತೆ ವಕೀಲರು ಹಾಗೂ ಕಕ್ಷಿಗಾರರಿಗೆ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಗುರುವಾರ ಎಚ್ಚರಿಸಿದ್ದಾರೆ. ಹಣಕಾಸು ವ್ಯವಹಾರ ನಡೆಸುವಾಗಲೂ ಹೆಚ್ಚು ಜಾಗರೂಕರಾಗಿರುವಂತೆ ಹೇಳಿದ್ದಾರೆ.
ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಚಂದ್ರಚೂಡ್ ಅವರು ಈ ಎಚ್ಚರಿಕೆ ನೀಡಿದ್ದಾರೆ. ‘ಯಾವುದೇ ವೆಬ್ಸೈಟ್ ಅಥವಾ ಲಿಂಕ್ ಬಂದಾಗ, ಅವುಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸದೇ ಕ್ಲಿಕ್ ಮಾಡಬಾರದು ಹಾಗೂ ಇತರರೊಂದಿಗೆ ಹಂಚಿಕೊಳ್ಳಬಾರದು’ ಎಂದು ಸುಪ್ರೀಂಕೋರ್ಟ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಸುಳ್ಳು ವೆಬ್ಸೈಟ್ ಸೃಷ್ಟಿಸಿರುವುದು ಸುಪ್ರೀಂಕೋರ್ಟ್ ರಿಜಿಸ್ಟ್ರಿ ಗಮನಕ್ಕೆ ಬಂದಿದೆ. ಆದರೆ, ರಿಜಿಸ್ಟ್ರಿಯು ಯಾರ ವೈಯಕ್ತಿಕ, ಹಣಕಾಸಿಗೆ ಸಂಬಂಧಿಸಿದ ಅಥವಾ ಗೌಪ್ಯ ಮಾಹಿತಿಯನ್ನು ಕೇಳುವುದಿಲ್ಲ. ಸುಪ್ರೀಂಕೋರ್ಟ್ನ ಅಧಿಕೃತ ವೆಬ್ಸೈಟ್ (www.sci.gov.in) ಅನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಮುಂದುವರಿಯಬೇಕು’ ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ವಿಶ್ವಾಸಾರ್ಹ ಸಂಸ್ಥೆಗಳ ಹೆಸರು ಬಳಸಿಕೊಂಡು ಸುಳ್ಳು ಸಂದೇಶ, ಇ– ಮೇಲ್ಗಳ ಮೂಲಕ ಲಿಂಕ್ ಕಳಿಸಿ, ಆ ಮೂಲಕ ನಡೆಸುವ ಮೋಸದ ವ್ಯವಹಾರವನ್ನು ‘ಫಿಶಿಂಗ್’ ಎನ್ನುತ್ತಾರೆ.