ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬಂಧನ

ಮಂಗಳೂರು(ಬೆಂಗಳೂರು): ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ನಾಯ್ಡು ಅವರನ್ನು ನಂದ್ಯಾಲದಲ್ಲಿ ನಂದ್ಯಾಲ ಪೊಲೀಸರ ಸಹಾಯದಿಂದ ಆಂಧ್ರಪ್ರದೇಶದ ಸಿಐಡಿ ಪೊಲೀಸರು ಶನಿವಾರ ಬೆಳಿಗ್ಗೆ 6 ಗಂಟೆಗೆ ಬಂಧಿಸಿದ್ದಾರೆ. ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹100 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ಡು ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿಸಲು ಸಿಐಡಿ ಪೊಲೀಸರು ನಾಯ್ಡು ಅವರು ಉಳಿದುಕೊಂಡಿದ್ದ ನಂದ್ಯಾಲ ಮನೆಗೆ ಮಧ್ಯರಾತ್ರಿ 3 ಗಂಟೆಗೆ ತೆರಳಿದ್ದರು. ಈ ವೇಳೆ ಟಿಡಿಪಿ ಕಾರ್ಯಕರ್ತರಿಂದ ಭಾರಿ ಗಲಾಟೆಗಳು ನಡೆದವು ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಮಂಡಳಿಯಲ್ಲಿ ನಡೆದಿರುವ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ಅವರನ್ನು ಬಂಧಿಸಲಾಗಿದೆ ಎಂದು ನಂದ್ಯಾಲ ವಲಯದ ಡಿಐಜಿ ರಘುರಾಮಿ ರೆಡ್ಡಿ ತಿಳಿಸಿರುವುದಾಗಿ ದಿ ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ. ಸದ್ಯ ನಾಯ್ಡು ಅವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ವಿಜಯವಾಡಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅನ್ವಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಯ್ಡು ಅವರ ಬಂಧನವನ್ನೂ ಸುದ್ದಿಸಂಸ್ಥೆ ಎಎನ್‌ಐ ಖಚಿತಪಡಿಸಿದೆ. ಟಿಡಿಪಿ ಈ ಬಗ್ಗೆ ಟ್ವೀಟ್ ಮಾಡಿದ್ದು, ನಾಯ್ಡು ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here