ಮಂಗಳೂರು(ವಾಷಿಂಗ್ಟನ್): ಪ್ರಬಲ ಭೂಂಕಪದಿಂದಾಗಿ ಮೊರಾಕೊ ಅಕ್ಷರಶಃ ನಲುಗಿದೆ. ಈವರೆಗೂ 632ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹಲವು ಕಟ್ಟಡಗಳು ಧರೆಗುರುಳಿವೆ. ಮನೆ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಬಲ ಭೂಕಂಪದಿಂದ ಜನರು ಭಯಭೀತರಾಗಿದ್ದಾರೆ.
ದೇಶದ ನೈರುತ್ಯ ದಿಕ್ಕಿನಲ್ಲಿ 72 ಕಿ.ಮೀ. ದೂರದಲ್ಲಿರುವ ಪ್ರಮುಖ ಪ್ರವಾಸಿ ತಾಣ ಮಾರ್ರಾಕೇಶ್‌ನಲ್ಲಿ ರಾತ್ರಿ 11.11ಕ್ಕೆ ಸಂಭವಿಸಿದ ಭೂಕಂಪನ, ರಿಕ್ಟರ್ ಮಾಪನದಲ್ಲಿ 6.8 ತೀವ್ರತೆ ದಾಖಲಾಗಿತ್ತು. ಇದರ ತೀವ್ರತೆಯನ್ನು ತೀರ ಪ್ರದೇಶಗಳಾದ ರಬಾಟ್, ಕಾಸಾಬ್ಲಾಂಕಾ ಹಾಗೂ ಎಸ್ಸೂರಿಯಾಗಳೂ ಅನುಭವಿಸಿವೆ. ಭೂಕಂಪಕ್ಕೂ ಮುನ್ನ ದೊಡ್ಡದಾದ ಶಬ್ದ ಕಿವಿಗಪ್ಪಳಿಸಿತು. ಬಹುಶಃ ಇದು ಭೂಕಂಪವೇ ಇರಬೇಕು ಎಂದು ಭಾವಿಸಿದೆ ಎಂದು ಅಬ್ದೆಲ್ಲಾಕ್ ಎಲ್ ಇಮ್ರಾನಿ ತಮ್ಮ ಅನುಭವ ಹಂಚಿಕೊಂಡರು.
‘ಕಟ್ಟಡಗಳು ಚಲಿಸುತ್ತಿರುವಂತೆ ಅನುಭವವಾಯಿತು. ಹೊರಗೆ ಹೋಗಿ ನೋಡಿದಾಗ ಸಾಕಷ್ಟು ಜನ ಜಮಾಯಿಸಿದ್ದರು. ಎಲ್ಲರೂ ಗಾಬರಿ ಹಾಗೂ ಭಯದಿಂದಿದ್ದರು. ಮಕ್ಕಳು ಅಳುತ್ತಿದ್ದವು. ಪಾಲಕರು ಸುರಕ್ಷಿತ ತಾಣಕ್ಕಾಗಿ ಅಲೆದಾಡುತ್ತಿದ್ದರು. ಹೀಗಾದ ಹತ್ತು ನಿಮಿಷಗಳಲ್ಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಫೋನ್ ನೆಟ್ವರ್ಕ್ ಕೂಡಾ ಸ್ತಬ್ಧವಾಯಿತಾದರೂ, ಮರಳಿ ಬಂತು. ಎಲ್ಲರೂ ಹೊರಗೇ ಇರಲು ನಿರ್ಧರಿಸಿದೆವು’ ಎಂದು ವಿವರಿಸಿದರು. ಒಳಾಡಳಿತ ಮಂತ್ರಾಲಯದ ಮಾಹಿತಿಯಂತೆ ಈವರೆಗೂ 632 ಜನ ಮೃತಪಟ್ಟಿದ್ದಾರೆ. 329 ಜನ ಗಾಯಗೊಂಡಿದ್ದಾರೆ. ಇವರಲ್ಲಿ 51 ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮೊರಾಕೊದಲ್ಲಿ ಸಂಭವಿಸಿದ ಭೂಕಂಪನದ ಅನುಭವ ಪಕ್ಕದ ಅಲ್ಜೇರಿಯಾ ಜನರಿಗೂ ಆಗಿದೆ. ಆದರೆ ಅಲ್ಲಿ ಯಾವುದೇ ಜೀವ ಹಾಗೂ ಆಸ್ತಿಪಾಸ್ತಿ ಹಾನಿಯಾದ ಕುರಿತು ವರದಿಯಾಗಿಲ್ಲ ಎಂದು ನಾಗರಿಕ ಸೇನಾ ವಿಭಾಗ ಸ್ಪಷ್ಟಪಡಿಸಿದೆ.
ಈ ನಡುವೆ ಮೊರಾಕೊ ದೇಶಕ್ಕೆ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.