ʼರಾಮಮಂದಿರ ಉದ್ಘಾಟನೆ ಬಳಿಕ ಗೋಧ್ರಾ ಮಾದರಿಯ ಹಿಂಸಾಚಾರ ಸಾಧ್ಯತೆ!ʼ – ಉದ್ಧವ್ ಹೇಳಿಕೆ

ಮಂಗಳೂರು(ಮುಂಬೈ): ರಾಮಮಂದಿರದ ಉದ್ಘಾಟನೆಗಾಗಿ ಉತ್ತರ ಪ್ರದೇಶದ ಅಯೋಧ್ಯೆಗೆ ಬರಲಿರುವ ದೊಡ್ಡ ಸಂಖ್ಯೆಯ ಜನರು, ವಾಪಸು ಮರಳುವಾಗ ಗೋಧ್ರಾ ಮಾದರಿಯ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಸೆ.10ರಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಫೆಬ್ರವರಿ 27, 2002ರಂದು ಕರಸೇವಕರು ಅಯೋಧ್ಯೆಯಿಂದ ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದಾಗ ಗೋಧ್ರಾ ರೈಲು ನಿಲ್ದಾಣದಲ್ಲಿ ಕರಸೇವಕರು ಸಂಚರಿಸುತ್ತಿದ್ದ ರೈಲು ಬೋಗಿಗೆ ಬೆಂಕಿ ಹಚ್ಚಲಾಗಿದ್ದು, ಇದರಿಂದ ಹಲವು ಕರಸೇವಕರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಗುಜರಾತ್ ರಾಜ್ಯದಾದ್ಯಂತ ಹತ್ಯಾಕಾಂಡ ಆರಂಭವಾಗಿತ್ತು. ರಾಮ ಮಂದಿರ ಉದ್ಘಾಟನೆಗೆ ಸರ್ಕಾರವು ಬಸ್ ಗಳು ಹಾಗೂ ಟ್ರಕ್ ಗಳಲ್ಲಿ ಅಸಂಖ್ಯಾತ ಜನರನ್ನು ಕರೆ ತರುವ ಸಾಧ್ಯತೆ ಇದೆ. ಅವರು ಮರಳುವಾಗ ಗೋಧ್ರಾ ಮಾದರಿಯ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಜಲಗಾಂವ್ ನಲ್ಲಿ ಠಾಕ್ರೆ ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಜನವರಿ 2024ರಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಈ ನಡುವೆ, ಉದ್ಧವ್ ಠಾಕ್ರೆ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, “ವೋಟಿಗಾಗಿ ಪ್ರಧಾನಿ ಮೋದಿ ವಿರುದ್ಧ ರಚನೆಯಾಗಿರುವ ಮೈತ್ರಿಕೂಟವು ಯಾವ ಹಂತಕ್ಕಾದರೂ ಹೋಗಲಿದೆ ಎಂದಷ್ಟೆ ನಾನು ಹೇಳಬಲ್ಲೆ. ಅವರಿಗೆ ಕೊಂಚ ವಿವೇಕ ನೀಡು ಎಂದು ನಾನು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ. ಇದು ನಾಚಿಕೆಗೇಡಿನ ಮತ್ತು ಅಸಭ್ಯ ಹೇಳಿಕೆಯಾಗಿದೆ. ನಾವಿದನ್ನು ಖಂಡಿಸುತ್ತೇವೆ” ಎಂದು ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here