ರಾಜ್ಯದ 161 ತಾಲೂಕುಗಳು ಬರ ಘೋಷಣೆಗೆ ಅರ್ಹ – ಸಿಎಂಗೆ ಶಿಫಾರಸು-ಸಚಿವ ಕೃಷ್ಣ ಬೈರೇಗೌಡ

ಮಂಗಳೂರು(ಬೆಂಗಳೂರು): ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಬರ ಘೋಷಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆ ಚರ್ಚೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮತ್ತು ಬೆಳೆ ಪರಿಶೀಲನೆ ನಡೆಸಲಾಗಿದ್ದು, ಕೇಂದ್ರದ ಮಾರ್ಗಸೂಚಿಯಂತೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ. ಈ ಬಗ್ಗೆ ಇಂದು ನಡೆದ ಐದನೇ ಸಂಪುಟ ಉಪಸಮಿತಿ ಸಭೆಯಲ್ಲಿ ಸಂಬಂಧಿತ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬರ ಘೋಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಲಾಗಿದೆ. ಅಲ್ಲದೆ, ಈ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ಸಿದ್ದತೆ ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

“ಕಳೆದ ವಾರ ನಡೆದ ನಾಲ್ಕನೇ ಸಂಪುಟ ಉಪ ಸಮಿತಿ ಸಭೆಯಲ್ಲೇ 62 ತಾಲೂಕುಗಳು ಕೇಂದ್ರ ಮಾರ್ಗಸೂಚಿಯಂತೆ ಬರ ಘೋಷಣೆಗೆ ಅರ್ಹ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೂ ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಇದ್ದ ಕಾರಣಕ್ಕೆ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಪರಿಶೀಲನೆಗೆ ಸೂಚಿಸಲಾಗಿತ್ತು. ಎಲ್ಲಾ ತಾಲೂಕುಗಳ ವರದಿಯೂ ನಿನ್ನೆ ಕೈಸೇರಿದ್ದು ಕೇಂದ್ರ ಸರ್ಕಾರದ ಬರ ಮಾರ್ಗಸೂಚಿಯಂತೆ ಒಟ್ಟಾರೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿವೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ʼʼ161 ತಾಲೂಕುಗಳಲ್ಲದೆ ಇನ್ನೂ 34 ತಾಲೂಕುಗಳಲ್ಲಿಯೂ ಭಾಗಶಃ ಬರದ ಪರಿಸ್ಥಿತಿ ಇದೆ. ಆದರೆ, ಈ ತಾಲೂಕುಗಳನ್ನೂ ಬರ ಪೀಡಿತ ಪ್ರದೇಶಗಳೆಂದು ಘೋಷಿಸಲು ಕೇಂದ್ರದ ಮಾರ್ಗಸೂಚಿ ಅಡ್ಡಿಯಾಗಿದೆ. ಹೀಗಾಗಿ 15 ದಿನಗಳ ನಂತರ ಸ್ಯಾಟಲೈಟ್ ಇಮೇಜ್ ಆಧರಿಸಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆಗೆ ಸೂಚಿಸಲಾಗುವುದು. ಈ ವೇಳೆ ಸಮೀಕ್ಷೆಗೆ ಒಳಪಟ್ಟ ತಾಲೂಕು ‘ಕೇಂದ್ರದ ಬರ ಮಾರ್ಗಸೂಚಿ’ಗೆ ಅನ್ವಯಿಸಿದರೆ ಎರಡನೇ ಹಂತದಲ್ಲಿ ಬರ ಘೋಷಣೆ ಮಾಡಲಾಗುವುದುʼʼ ಎಂದರು.

 

LEAVE A REPLY

Please enter your comment!
Please enter your name here