ಮಂಗಳೂರು: ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ಮಹಾರಾಷ್ಟ್ರದ ಇಬ್ಬರು ವ್ಯಕ್ತಿಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರದ ಇಚಲಕರಂಜಿ ಎಂಬಲ್ಲಿ ಎರಡು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಸೆ.14ರಂದು ವರದಿ ಮಾಡಿದೆ.
78 ವರ್ಷ ಪ್ರಾಯದ ಹಾಗೂ 75 ವರ್ಷ ಪ್ರಾಯದ ಇಬ್ಬರೂ ಪುರುಷ ರೋಗಿಗಳಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಒಬ್ಬ ರೋಗಿಗೆ ಝಿಕಾ ವೈರಸ್ ಇರುವುದು ದೃಢಪಟ್ಟಿದೆ. ಅವರ ಮಾದರಿಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ ಪುಣೆ ಕೇಂದ್ರಕ್ಕೆ ಕಳುಹಿಸಲಾಗಿದೆ ಮತ್ತು ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದವರನ್ನು ಮತ್ತು ರೋಗಲಕ್ಷಣಗಳನ್ನು ಹೊಂದಿದವರನ್ನು ನಿಗಾ ವಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಕೇರಳದಲ್ಲಿ ಹೆಚ್ಚಿದ ನಿಫಾ ವೈರಸ್ ಕಾರಣ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಡಿ ಭಾಗದಲ್ಲಿರುವವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. 1947 ರಲ್ಲಿ ಉಗಾಂಡಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಜಿಕಾ ವೈರಸ್ ಸೋಂಕು, ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುವ ರೋಗವಾಗಿದೆ ಎಂದು ತಜ್ಞರು ಹೇಳಿದ್ದರು