ಮಂಗಳೂರು (ಬೆಂಗಳೂರು): ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಶುಕ್ರವಾರ ನಸುಕಿನಲ್ಲಿ ದೇಶದ ಮೊಟ್ಟಮೊದಲ ಸೌರ ಬಾಹ್ಯಾಕಾಶ ವೀಕ್ಷಣಾ ಮಿಷನ್ ಆದಿತ್ಯ ಎಲ್-1ನ ನಾಲ್ಕನೇ ಭೂಬಂಧಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಸೆ.2ರಂದು ಉಡಾವಣೆಯಾದ ಮಿಷನ್ ನ ನಾಲ್ಕನೇ ಕಾರ್ಯಾಚರಣೆ ಇಂದು ಮುಂಜಾನೆ 2.15ಕ್ಕೆ ಪೂರ್ಣಗೊಂಡಿದೆ. ಇದೀಗ ಬಾಹ್ಯಾಕಾಶ ನೌಕೆ 256 ಕಿಲೋಮೀಟರ್ 1,21,973 ಕಿಲೋಮೀಟರ್ ಕಕ್ಷೆಯಲ್ಲಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಮೊರೀಷಿಯಸ್, ಬೆಂಗಳೂರು, ಶ್ರೀಹರಿಕೋಟಾ ಮತ್ತು ಪೋರ್ಟ್ಬ್ಲೇರ್ನಲ್ಲಿರುವ ಭೂ ಕೇಂದ್ರಗಳು ಈ ಕಾರ್ಯಾಚರಣೆ ವೇಳೆ ಉಪಗ್ರಹವನ್ನು ಪತ್ತೆ ಮಾಡಿವೆ. ದಹನೋತ್ತರ ಕಾರ್ಯಚರಣೆಗೆ ಪೂರಕವಾಗಿ ಫಿಜಿ ದ್ವೀಪದಲ್ಲಿ ಸಂಚಾರಿ ಟರ್ಮಿನಲ್ ನಿಯೋಜಿಸಲಾಗಿದೆ ಎಂದು ಹೇಳಿದೆ.
ಭೂಬಂಧಿತ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆ 16 ದಿನಗಳ ಕಾಲ ಇರುತ್ತದೆ ಹಾಗೂ ತನ್ನ ಮುಂದಿನ ಪಯಣಕ್ಕೆ ವೇಗ ಪಡೆಯಲು ಐದು ಕಾರ್ಯಚರಣೆಗೆ ಒಳಗಾಗಲಿದೆ ಎಂದು ಆದಿತ್ಯ ಎಲ್-1 ಉಡಾವಣೆಗೆ ಮುನ್ನ ಇಸ್ರೋ ಹೇಳಿಕೆ ನೀಡಿತ್ತು. ಆ ಬಳಿಕ ಟಿಎಲ್ಐ ಕಾರ್ಯಚರಣೆ ಮೂಲಕ ತನ್ನ ಗಮ್ಯಸ್ಥಾನಕ್ಕೆ 110 ದಿನಗಳ ಪಯಣವನ್ನು ಆರಂಭಿಸಲಿದೆ. ಮುಂದಿನ ಟಿಎಲ್ಐ ಕಾರ್ಯಾಚರಣೆ ಅಂದರೆ ಭೂಮಿಯಿಂದ ಬೀಳ್ಕೊಡುವ ಕಾರ್ಯಾಚರಣೆ ಸೆ.19ರಂದು ಮುಂಜಾನೆ 2 ಗಂಟೆಗೆ ನಡೆಯಲಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಸುಮಾರು 15 ಲಕ್ಷ ಕಿಲೋಮೀಟರ್ ದೂರದ ಎಲ್1 ಪ್ರದೇಶಕ್ಕೆ ಬಾಹ್ಯಾಕಾಶ ನೌಕೆ ಆಗಮಿಸಿದ ಬಳಿಕ ಆದಿತ್ಯ ಎಲ್-1 ಮತ್ತೊಂದು ಕಾರ್ಯಾಚರಣೆಗೆ ಒಳಗಾಗಲಿದ್ದು, ಅಲ್ಲಿ ಕಕ್ಷೆಯನ್ನು ಸುತ್ತುವ ಕಾರ್ಯ ಮಾಡಲಿದೆ.