ಮಂಗಳೂರು (ಮಂಜೇಶ್ವರ): ಗಡಿ ಭಾಗದ ಮಂಜೇಶ್ವರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಪ್ಪಳ ಪತ್ವಾಡಿಯ ನೂರ್ ಅಲಿ(42), ಉಪ್ಪಳ ಹಿದಾಯತ್ ನಗರದ ಅಫ್ಜಲ್ (38) ಮತ್ತು ಕೆ.ಎಸ್.ಸತ್ತಾರ್ (37) ಎಂದು ಗುರುತಿಸಲಾಗಿದೆ.
ನೂರ್ ಅಲಿ ಕೆಲ ವರ್ಷಗಳ ಹಿಂದೆ ತಲಪಾಡಿಯಲ್ಲಿ ಉಪ್ಪಳದ ಕಾಲಿಯಾ ರಫೀಕ್‌ನನ್ನು ಗುಂಡಿಕ್ಕಿ ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ಎರಡು ವಾರಗಳ ಹಿಂದೆ ಉಪ್ಪಳ ಹಿದಾಯತ್ ನಗರದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿ ದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರ ಸಂಖ್ಯೆ ಐದಕ್ಕೇರಿದೆ. ಜಿಪಂ ಸದಸ್ಯ ಗೋಲ್ಡನ್ ಅಬ್ದುರಹ್ಮಾನ್ ಸೇರಿದಂತೆ ಇಬ್ಬರನ್ನು ಈ ಹಿಂದೆ ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯಿಂದ ಮಂಜೇಶ್ವರ ಠಾಣಾ ಸಬ್‌ಇನ್‌ಸ್ಪೆಕ್ಟರ್ ಅನೂಪ್ ಸೇರಿದಂತೆ ಇಬ್ಬರು ಪೊಲೀಸರು ಗಾಯಗೊಂಡಿದ್ದರು.