ರಾಮಚರಿತಮಾನಸ ‘ಪೊಟ್ಯಾಸಿಯಂ ಸೈನೈಡ್‌’ನಷ್ಟೆ ವಿಷಕಾರಿ – ಬಿಹಾರ ಸಚಿವ ಚಂದ್ರಶೇಖರ್‌

ಮಂಗಳೂರು (ಪಟ್ನಾ): ರಾಮಚರಿತಮಾನಸದಂತಹ ಪ್ರಾಚೀನ ಕೃತಿಗಳಲ್ಲಿ ‘ಪೊಟ್ಯಾಸಿಯಂ ಸೈನೈಡ್‌’ಗೆ ಹೋಲಿಸುವಂತಹ ವಿನಾಶಕಾರಿ ಅಂಶಗಳಿವೆ ಎಂದು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್‌ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಆರ್‌ಜೆಡಿ ನಾಯಕ ಸೆ.14ರ ರಾತ್ರಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.

ಇದು ನನ್ನೊಬ್ಬನ ದೃಷ್ಟಿಕೋನವಷ್ಟೇ ಅಲ್ಲ, ಹಿಂದಿಯ ಪ್ರಸಿದ್ಧ ಲೇಖಕ ನಾಗಾರ್ಜುನ ಮತ್ತು ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ ಅವರೂ ರಾಮಚರಿತಮಾನಸವು ಪ್ರತಿಗಾಮಿ ಚಿಂತನೆಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಕೃತಿಗಳಲ್ಲಿ ಹಲವು ಮಹತ್ವದ ವಿಚಾರಗಳು ಅಡಗಿವೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಆದರೆ, 55 ಬಗೆಯ ಖಾದ್ಯಗಳಿರುವ ಹಬ್ಬದೂಟದ ಮೇಲೆ ಪೊಟ್ಯಾಸಿಯಂ ಸೈನೈಡ್‌ ಸಿಂಪಡಿಸಿದರೆ ಅದು ‌ಸೇವಿಸಲು ಯೋಗ್ಯವಾಗುವುದಿಲ್ಲ ಎಂಬ ಹೋಲಿಕೆಯನ್ನೂ ನೀಡಿದ್ದಾರೆ.

ಜಾತಿ ತಾರತಮ್ಯದ ಬಗ್ಗೆ ನಾನು ಆರೋಪ ಮಾಡಿದರೆ ನಿಂದನೆಗಳು ಹಾಗೂ ದೈಹಿಕ ಹಿಂಸೆಯ ಬೆದರಿಕೆಗಳು ಬರುತ್ತವೆ. ಆದರೆ ಇಂಥದ್ದೇ ಕಳವಳವನ್ನು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ನೀಡಿದರೆ ಯಾರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸಮಾನತೆಯ ಸಮಾಜವನ್ನು ಸ್ಥಾಪಿಸಲು ಜಾತಿಗಣತಿ ಅಗತ್ಯ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ. ಆರ್‌ಜೆಡಿ ಹಿರಿಯ ನಾಯಕನ ಹೇಳಿಕೆಯಿಂದ ಸ್ವತಃ ಆರ್‌ಜೆಡಿ ಅಂತರ ಕಾಯ್ದುಕೊಂಡಿದ್ದರೆ, ಮಿತ್ರ ಪಕ್ಷ ಜೆಡಿ (ಯು) ಮತ್ತು ವಿರೋಧ ಪಕ್ಷ ಬಿಜೆಪಿ ಟೀಕಿಸಿವೆ.

ಶಿಕ್ಷಣ ಸಚಿವರು ಸಂತ ರವಿದಾಸ್‌, ಸ್ವಾಮಿ ವಿವೇಕಾನಂದ ಅವರಂತಹ ಮಹಾನ್‌ ಪ್ರಗತಿಪರ ವ್ಯಕ್ತಿಗಳನ್ನು ಒಳಗೊಂಡಿರುವ ಶ್ರೇಷ್ಠ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಏಕೆ ಮೌನವಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ಬಿಜೆಪಿ ಮಾಧ್ಯಮ ಸಮಿತಿಯಲ್ಲಿರುವ ನೀರಜ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಸಂವಿಧಾನವು ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡಬೇಕು ಎಂದು ಹೇಳುತ್ತದೆ. ಕೆಲವರು ಪ್ರಚಾರಕ್ಕಾಗಿ ಏನೇನೊ ಹೇಳುತ್ತಾರೆ. ಅದನ್ನೆಲ್ಲ ನಾವು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಕ್ತಾರ ಅಭಿಷೇಕ್‌ ಝಾ ಹೇಳಿದ್ದಾರೆ. ಆರ್‌ಜೆಡಿ ಪಕ್ಷವು ಸಾಮಾಜಿಕ ನ್ಯಾಯದ ಪರವಾಗಿ ನಿಂತಿರುವುದು ನಿಜ. ಆದರೆ ಅದು ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಆರ್‌ಜೆಡಿ ವಕ್ತಾರ ಶಕ್ತಿ ಯಾದವ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here